ಡಿಸೆಂಬರ್ 10ರಂದು ಅವತಾರ ಪುರುಷ ತೆರೆಗೆ

ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ “ಅವತಾರ ಪುರುಷ” ಚಿತ್ರ ಡಿಸೆಂಬರ್ 10ರಂದು ಬಿಡುಗಡೆಯಾಗುತ್ತಿದೆ. ನಟ ಶರಣ್ ಅವರು ಚಿತ್ರದಲ್ಲಿ ಹತ್ತು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

“ನಾನು ಈವರೆಗೂ ಈ ರೀತಿಯ ಚಿತ್ರ ಮಾಡಿಲ್ಲ. ನನ್ನ ಈವರೆಗಿನ ಸಿನಿಪಯಣದಲ್ಲೇ ದೊಡ್ಡ ಬಜೆಟ್ ನ‌ ಚಿತ್ರವಿದು. ಅದ್ದೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ಇನ್ನೂ ನಿರ್ದೇಶಕ‌ ಸಿಂಪಲ್ ಸುನಿ‌, ಅವರ ಹೆಸರಿನಲ್ಲಿ ಮಾತ್ರ ಸಿಂಪಲ್ ಇಲ್ಲ. ಸಿಂಪಲೆಸ್ಟ್ ಸುನಿ ಅವರು. ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ‌ ಸೊಗಸಾಗಿ ‌ಮೂಡಿ ಬಂದಿದೆ. ನಾನು ಸುಮಾರು ಹತ್ತು ಅವತಾರಗಳಲ್ಲಿ ಕಾಣಿಸಿಕೊಂಡಿದ್ದು, ಇದೇ ಡಿಸೆಂಬರ್ ಹತ್ತರಂದು “ಅವತಾರ ಪುರುಷ” ನ ಆಗಮನವಾಗಲಿದೆ. ನೋಡಿ ಹಾರೈಸಿ” ಎಂದು ನಾಯಕ ಶರಣ್ ಹೇಳಿದ್ದಾರೆ.

“ಎಲ್ಲರೊಡನೆ ಉತ್ತಮ ಬಾಂಧವ್ಯ ಬೆಸೆದ ಸಿನಿಮಾ “ಅವತಾರ ಪುರುಷ”. ಈ ತಂಡದಲ್ಲಿ ಎಲ್ಲರೂ ಒಂದೇ ಕುಟುಂಬದವರ ಹಾಗೆ ಇದ್ದೆವು. ಶರಣ್ ಹಾಗೂ ಸುನಿ ಅವರ ಕಾಂಬಿನೇಶನಲ್ಲಿ ಈ ಚಿತ್ರ ಹೇಗೆ ಬರಬಹುದು ಎನ್ನವ ಕುತೂಹಲ ಇದೆ. ನಾನು ಚಿತ್ರ ನೋಡುವ ಕಾತುರದಲ್ಲಿದ್ದೇನೆ. ನಿರ್ದೇಶಕ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸರಳತೆ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಒಟ್ಟಿನಲ್ಲಿ ಉತ್ತಮ ಸಿನಿಮಾದಲ್ಲಿ ಅಭಿನಯಿಸಿದ ತೃಪ್ತಿಯಿದೆ. ಚಿತ್ರವನ್ನು ಜನರು ಕೂಡ ಮೆಚ್ಚಿಕೊಳ್ಳುತ್ತಾರೆ ಎನ್ನುವ ಭರವಸೆಯಿದೆ” ಎಂದು ನಟಿ ಆಶಿಕಾ ರಂಗನಾಥ್ ಹೇಳಿದ್ದಾರೆ.

“ನಾನು ವೆಬ್ ಸಿರೀಸ್ ಗೆ ಎಂದು ಮಾಡಿದ ಕಥೆಯಿದು. ಪುಷ್ಕರ್ ಅವರು ಈ ಕಥೆ ಕೇಳಿ, ವೆಬ್ ಸಿರೀಸ್ ಬೇಡ . ಸಿನಿಮಾ ಮಾಡೋಣ ಅಂದರು. ಎರಡು ಭಾಗಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲ ಭಾಗ ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಎರಡನೇ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ನಿರ್ದೇಶಕನಿಗೆ ಸಿನಿಮಾ ಬಗ್ಗೆ ತನ್ನದೇ ಆದ ಒಂದು ಇಮೇಜಿನೇಶನ್ ಇರುತ್ತದೆ.. ಆದರೆ ಇಮೇಜಿನೇಶನ್ ಮೀರಿ ” ಅವತಾರ ಪುರುಷ ” ಚಿತ್ರ ಬಂದಿದೆ” ಎಂದು ನಿರ್ದೇಶಕ ಸುನಿ ಹೇಳಿದ್ದಾರೆ.

” ಶರಣ್ – ಆಶಿಕಾ ರಂಗನಾಥ್ ಅವರ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಣಿ, ಮುಂತಾದ ಅನುಭವಿ ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಚೆಂಡೂರ್ ನಟನೆಯೊಂದಿಗೆ ಸ್ಕ್ರಿಪ್ಟ್ ವರ್ಕ್ ನಲ್ಲೂ ನೆರವಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಉತ್ತಮವಾಗಿ ಮೂಡಿಬಂದಿವೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ “ಅವತಾರ ಪುರುಷ” ನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ” ಎಂದು ಸಿಂಪಲ್ ಸುನಿ ಹೇಳಿದ್ದಾರೆ.

” ‘ಆಪ್ತಮಿತ್ರ’ ನಂತರ ಕನ್ನಡದಲ್ಲಿ ಬರುತ್ತಿರುವ ಸಿನಿಮಾ “ಅವತಾರ ಪುರುಷ”. ಹತ್ತು -ಹದಿನೈದು ವರ್ಷಗಳಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ ಅನಿಸುತ್ತದೆ. ನಾಯಕ ಶರಣ್, ನಾಯಕಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಎಲ್ಲಾ ಕಲಾವಿದರ ಸಹಕಾರದಿಂದ ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಡಿಸೆಂಬರ್ 10ರಂದು ಸುಮಾರು 350 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ಭಾಗ 1 ಬಿಡುಗಡೆಯಾದ ನೂರನೇ ದಿನಕ್ಕೆ ಸರಿಯಾಗಿ ಈ ಚಿತ್ರದ ಎರಡನೇ ಭಾಗ ಕೂಡ ಬಿಡುಗಡೆಯಾಗಲಿದೆ” ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ಹೇಳಿದ್ದಾರೆ.
___

 

Be the first to comment

Leave a Reply

Your email address will not be published. Required fields are marked *

Translate »
error: Content is protected !!