ಬಾಲಿವುಡ್ನ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆಯ ಮೇಲೆ ನಡೆದ ಗುಂಡಿನ ದಾಳಿ ಬಾಲಿವುಡ್ ಚಿತ್ರರಂಗವನ್ನು ಬೆಚ್ಚಿಬೀಳಿಸಿದ್ದು, ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದಾಳಿ ನಡೆಸಲು ನಾಲ್ಕು ತಿಂಗಳ ಹಿಂದೆಯೇ ಸಂಚು ರೂಪಿಸಿತ್ತು ಎಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮೂಲಕ ಗುಂಡಿನ ದಾಳಿಯ ಹೊಣೆ ಹೊತ್ತಿದೆ. ಪ್ರಕರಣದಲ್ಲಿ ಇದುವರೆಗೆ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಪ್ರಮುಖ ಸಂಪರ್ಕ ವ್ಯಕ್ತಿ ಶುಭಂ ಲೋಂಕರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಆರೋಪಿಗಳು ಪರಸ್ಪರ ಸಂಪರ್ಕಕ್ಕೆ ಸಿಗ್ನಲ್ ಆ್ಯಪ್ ಬಳಸಿರುವುದೂ ಬೆಳಕಿಗೆ ಬಂದಿದೆ.
ಮುಂಬೈ ಅಪರಾಧ ವಿಭಾಗ ಲಾರೆನ್ಸ್ ಬಿಷ್ಣೋಯ್ ಅವರ ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ. ಅಧಿಕಾರಿಗಳು ಶಬರಮತಿ ಜೈಲಿನಲ್ಲಿ ಬಂಧಿತನಾಗಿರುವ ಲಾರೆನ್ಸ್ ನ್ನು ವಿಚಾರಿಸಲು ಗುಜರಾತ್ಗೆ ತೆರಳಲಿದ್ದಾರೆ .
ನಟ ಸಲ್ಮಾನ್ ಖಾನ್ ಅವರ ಮನೆ, ಬಾಬಾ ಸಿದ್ದಿಕಿ ಮನೆ ಮತ್ತು ಈಗ ರೋಹಿತ್ ಶೆಟ್ಟಿ ಮನೆ ಮೇಲೆ ನಡೆದ ಗುಂಡಿನ ದಾಳಿಗಳು ಒಂದೇ ಗ್ಯಾಂಗ್ ಕೈವಾಡ ಎನ್ನುವುದು ಸ್ಪಷ್ಟವಾಗಿದ್ದು, ಬಾಲಿವುಡ್ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
—-





Be the first to comment