ಶಾರುಖ್ ಖಾನ್ ಮತ್ತು ವಿಜಯ್ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದ ಅಟ್ಲೀ ಮತ್ತೊಬ್ಬ ತಮಿಳು ಸ್ಟಾರ್ ಅಜಿತ್ ಕುಮಾರ್ ಜೊತೆ ಕೆಲಸ ಮಾಡಲು ರೆಡಿಯಾಗಿದ್ದಾರೆ.
‘ನಾನು ಅಜಿತ್ ಕುಮಾರ್ ಜೊತೆ ಶೀಘ್ರದಲ್ಲೇ ಸಿನಿಮಾ ಮಾಡುವ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಅವರಿಗೆ ಕಥೆಯೂ ಸಿದ್ಧವಾಗಿದೆ’ ಎಂದು ಅಟ್ಲೀ ಹೇಳಿದ್ದಾರೆ.
“ಅಜಿತ್ ಕುಮಾರ್ ಅವರಿಗೆ ಸೂಕ್ತವಾದ ಕಥೆ ನನ್ನ ಬಳಿ ಇದೆ. ಅದರ ಮೇಲೆ ಇನ್ನೂ ಕೆಲಸ ಮಾಡಬೇಕಾಗಿದೆ. ಅವರಲ್ಲಿ ಕಥೆಯ ಬಗ್ಗೆ ಹೇಳಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಅಜಿತ್ ನನ್ನ ಕಥೆಯನ್ನು ಒಪ್ಪಿಕೊಂಡರೆ, ಸೂಪರ್ ಹಿಟ್ ಚಿತ್ರವೊಂದು ಮೂಡಿ ಬರಲಿದೆ. ಅವರು ನನ್ನನ್ನು ಕರೆಯುವುದಕ್ಕೆ ಕಾಯುತ್ತಿದ್ದೇನೆ” ಎಂದು ಅಟ್ಲೀ ಹೇಳಿದ್ದಾರೆ.
ಅಟ್ಲೀ ಇತ್ತೀಚೆಗಷ್ಟೇ ಬಹುತಾರಾಗಣದ ಸಿನಿಮಾ ಘೋಷಣೆ ಮಾಡಿದ್ದಾರೆ. ಶಾರುಖ್ ಖಾನ್ ಮತ್ತು ವಿಜಯ್ ಜೊತೆಗಿನ ಈ ಚಿತ್ರ 3,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ ಎಂದು ವರದಿಗಳಿವೆ.
ಇದರ ಜೊತೆಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಯೂ ಅಟ್ಲೀ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಈಗಾಗಲೇ ಅಲ್ಲು ಅರ್ಜುನ್ ಜೊತೆ ಅಟ್ಲೀ ಚಿತ್ರ ಕಥೆಯ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ. ಇವರಿಬ್ಬರು ಮುಂಬೈನಲ್ಲಿ ಭೇಟಿಯಾದ ವಿಡಿಯೋಗಳು ಇತ್ತೀಚೆಗೆ ವೈರಲ್ ಆಗುತ್ತಿದೆ.
ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅಟ್ಲೀ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಜೊತೆ ‘ಜವಾನ್’ ಸಿನಿಮಾ ಮಾಡಿದ್ದಾರೆ. ನಯನತಾರಾ, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರ ಸೆಪ್ಟೆಂಬರ್ 7ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
—–

Be the first to comment