ಎಂಇಎಸ್‌ನ ಕೆಲ ಕಾರ್ಯಕರ್ತರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ವೇಳೆ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಬಗ್ಗೆ ಕನ್ನಡ ಚಿತ್ರರಂಗದ ಹಲವರು ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.
ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿದ ಎಂಇಎಸ್ ಕಾರ್ಯಕರ್ತರು ಕನ್ನಡ ಧ್ವಜವನ್ನು ಸುಟ್ಟು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಈ ಕೃತ್ಯವನ್ನು ಶಿವರಾಜಕುಮಾರ್, ಜಗ್ಗೇಶ್, ಗಣೇಶ್, ದುನಿಯಾ ವಿಜಯ್, ವಿನೋದ್ ಪ್ರಭಾಕರ್ ಸೇರಿದಂತೆ ಹಲವರು ಖಂಡಿಸಿದ್ದಾರೆ.
ಕನ್ನಡ ಧ್ವಜ ಸುಟ್ಟವರ ವಿರುದ್ಧ ಆಕ್ರೋಶ ಹೊರ ಹಾಕಿರುವ ಗಣೇಶ್, “ಅವರು ಸುಟ್ಟಿದ್ದು ಧ್ವಜವಲ್ಲ, ಕನ್ನಡಿಗರ ಸ್ವಾಭಿಮಾನದ ಕಿಚ್ಚು. ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು. ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಜೈ ಕನ್ನಡಾಂಬೆ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನ್ನು ಸಾವಿರಾರು ಕನ್ನಡಿಗರು ಶೇರ್ ಮಾಡಿದ್ದಾರೆ.
“ನಾಡು, ನುಡಿ, ಭಾಷೆ ನಮ್ಮ ಉಸಿರಾಟದ ಒಂದು ಭಾಗ. ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ” ಎಂದು ದುನಿಯಾ ವಿಜಯ್ ಮನವಿ ಮಾಡಿದ್ದಾರೆ.
“ಜೈ ಕರ್ನಾಟಕ, ನಮ್ಮ ಕನ್ನಡದ ಬಾವುಟ ನಮ್ಮ ಘನತೆ, ಗೌರವ, ಅಸ್ಮಿತೆಯ ಸಂಕೇತ. ಕನ್ನಡ ಧ್ವಜಕ್ಕೆ ಮಾಡಿದ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಮಾಡುವ ಅವಮಾನ. ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಿ. ಅದೇ ರೀತಿ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ”. ಎಂದು ನಟ ವಿನೋದ್ ಪ್ರಭಾಕರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಕನ್ನಡ ಧ್ವಜ ಸುಟ್ಟ ಬಗ್ಗೆ ನಟ ಪ್ರಜ್ವಲ್ ದೇವರಾಜ್, ನಟಿ ಮೇಘನಾ ಗಾವ್ಕಂರ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡ ಧ್ವಜ ಸುಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಎಂಇಎಸ್ ಬೆಂಬಲಿಗರು, ”ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ” ಎಂದು ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದರು. ಇದಕ್ಕೆ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಎಂಇಎಸ್ ಪುಂಡರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಆಗ್ರಹ ಕೇಳಿ ಬಂದಿದೆ.
___
Be the first to comment