ಕನ್ನಡ ಚಿತ್ರರಂಗದಲ್ಲಿ ಒಂದು ಏರಿಯಾದಲ್ಲಿರುವ ಗೆಳೆಯರ ಕಥೆಗಳನ್ನು ಹೇಳುವ ಒಂದಷ್ಟು ಚಲನಚಿತ್ರಗಳು ಈಗಾಗಲೇ ತೆರೆಗೆ ಬಂದಿವೆ. ಈಗ ಅದೇ ಥರದ ಶೀರ್ಷಿಕೆ ಇದ್ದರೂ ಹೊಸ ಕಥೆ ಇಟ್ಟುಕೊಂಡು ಮತ್ತೊಂದು ಚಿತ್ರತಂಡ ಸಿನಿಮಾ ನಿರ್ಮಾಣಕ್ಕಿಳಿದಿದೆ. ಆ ಚಿತ್ರದ ಹೆಸರು ಏರಿಯಾ ಹುಡುಗರು. ಒಂದೇ ಏರಿಯಾದಲ್ಲಿರುವ ನಾಲ್ಕು ಜನ ಸ್ನೇಹಿತರ ಜೀವನದಲ್ಲಿ ನಡೆಯುವ ಹಲವಾರು ರೋಚಕ ತಿರುವುಗಳನ್ನು ಈ ಚಿತ್ರದ ಮೂಲಕ ತೆರೆಮೇಲೆ ಹೇಳಹೊರಟಿದ್ದಾರೆ.
ಚಿತ್ರದ ನಿರ್ದೇಶಕ ಮೋಹನ್ ಅಪ್ಪು. ಈ ಹಿಂದೆ ನಾನೊಂಥರಾ ಚಿತ್ರದಲ್ಲಿ ಅಭಿನಯಿಸಿದ್ದ ಡಾ.ತಾರಖ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಗಾಂಧಿಬಜಾರ್ನ ನೆಟ್ಟಕಲ್ಲಪ್ಪ ಸರ್ಕಲ್ನಲ್ಲಿರವ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಪೊಗರು ಖ್ಯಾತಿಯ ಧೃವ ಸರ್ಜಾ ಅವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಯುವ ಚಿತ್ರತಂಡದ ಹೊಸ ಪ್ರಯತ್ನವನ್ನು ಮೆಚ್ಚಿಕೊಂಡು ಒಳ್ಳೇದಾಗಲಿ ಎಂದು ಶುಭ ಹಾರೈಸಿದರು.
ಮೋಹನ್ ಅಪ್ಪು ಅವರ ಪ್ರಥಮ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ನಾಗೇಶ್ ಉಚ್ಚಂಗಿ ಅವರು ಛಾಯಾಗ್ರಹಣ ಮಾಡುವುದರ ಜೊತೆಗೆ ನಿರ್ದೇಶನದಲ್ಲೂ ಸಹ ಸಾಥ್ ನೀಡಿಸಿದ್ದಾರೆ. ಸುಮಂತ್ ಲವ್ಗುರು ಹಾಗೂ ನಾಗರಾಜ್ಗುಪ್ತ ಅವರು ಈ ಚಿತ್ರದ ನಿರ್ಮಾಪಕರು.
ಕಲ್ಕಿ ಅಭಿಷೇಕ್ ಅವರ ಸಂಗೀತ ಸಂಯೋಜನೆ ಈ ಚಿತ್ರದ ೪ ಹಾಡುಗಳಿಗಿದ್ದು, ನಾಗೇಶ್ ಉಚ್ಚಂಗಿ ಕ್ಯಾಮೆರಾ ವರ್ಕ್ ನಿಭಾಯಿಸುತ್ತಿದ್ದಾರೆ. ಸಂಭಾಷಣೆ ಹಾಗೂ ಸಾಹಿತ್ಯವನ್ನು ನಿರ್ದೇಶಕರೇ ರಚಿಸಿದ್ದಾರೆ. ಒಂದು ಏರಿಯಾದಲ್ಲಿರುವ 4 ಜನ ಸ್ನೇಹಿತರು ತಮ್ಮ ಜೀವನದಲ್ಲಿ ಯಾವುದೇ ಜವಾಬ್ದಾರಿ ಇಲ್ಲದೆ ತಾವು ನಡೆದದ್ದೇ ದಾರಿ ಎನ್ನುವ ಮನಸ್ಥಿತಿಯಲ್ಲಿ ತಮಗೆ ತೋಚಿದಂತೆ ನಡೆದುಕೊಳ್ತಿರ್ತಾರೆ, ಆದರೆ ಅವರಲ್ಲಿ ಒಬ್ಬ ಮಾತ್ರ ಬುದ್ದಿವಂತನಾಗಿದ್ದು, ತನ್ನ ಸ್ನೇಹಿತರನ್ನು ಸರಿಯಾರಿಗೆ ತರಲು ಆತ ಸಾಕಷ್ಟು ಸಲ ಪ್ರಯತ್ನವನ್ನು ಮಾಡರ್ತಾನೆ, ಆದರೆ ಆಗಿರುವುದಿಲ್ಲ, ಯಾವುದೋ ಒಂದು ಪರಿಸ್ಥಿತಿಗೆ ತಗಲಾಕಿಕೊಂಡಾಗ ಅವರಿಗೆಲ್ಲ ಬುದ್ದಿ ಬರುತ್ತದೆ. ಅವರೆಲ್ಲರೂ ಆ ಒಂದು ಸಂದರ್ಭವನ್ನು ಹೇಗೆ ಎದುರಿಸುತ್ತಾರೆ, ನಿಜಕ್ಕೂ ಅವರಿಗೆ ಜವಾಬ್ದಾರಿ ಬಂತಾ ಎಂಬೆಲ್ಲ ಪ್ರಶ್ನೆಗಳಿಗೆ ಏರಿಯಾ ಹುಡುಗರು ಚಿತ್ರ ಉತ್ತರ ಕೊಡುತ್ತದೆ, ಇದರ ಜೊತೆಗೆ ಒಂದು ಸಾಮಾಜಿಕ ಸಂದೇಶವನ್ನು ಕೂಡ ತಮ್ಮ ಚಿತ್ರದ ಮೂಲಕ ನಿರ್ದೇಶಕರು ಹೇಳಹೊರಟಿದ್ದಾರೆ. ಆ ನಾಲ್ವರಲ್ಲಿ ಬುದ್ದಿವಂತ ಹುಡುಗನಾಗಿ ತಾರಖ್ ಕಾಣಿಸಿಕೊಂಡಿದ್ದಾರೆ. ಈವರೆಗೂ ನೋಡಿರದ ಕಥೆ, ನಿರೂಪಣೆ ಚಿತ್ರದಲ್ಲಿರುತ್ತದೆ ನೋಡುಗರಿಗೆ ಪ್ರತಿ ಸೀನ್ ಕುತೂಹಲ ಕೆರಳಿಸುತ್ತಾ ಸಾಗುತ್ತೆ ಎಂದವರು ಹೇಳಿದ್ದಾರೆ. ಉಳಿದಂತೆ ಸಾಕಷ್ಟು ಯುವಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಏಪ್ರಿಲ್ ೫ ರಿಂದ ಆರಂಭಿಸಿ ಬೆಂಗಳೂರು, ಮೈಸೂರು, ಮಡಿಕೇರಿ, ಚಿಕ್ಕಮಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ.
Be the first to comment