ಅರಸಯ್ಯನ ಪ್ರೇಮ ಪ್ರಸಂಗ

Movie Review: ಮನದ ಅರಸಿಯ ಅರಸುವ ಅರಸಯ್ಯ!

ಚಿತ್ರ: ಅರಸಯ್ಯನ ಪ್ರೇಮ ಪ್ರಸಂಗ
ನಿರ್ದೇಶನ : ಜೆ.ವಿ.ಆರ್ ದೀಪು
ನಿರ್ಮಾಣ : ಮೇಘ ಶ್ರೀ ರಾಜೇಶ್
ತಾರಾಗಣ : ಮಹಾಂತೇಶ ಹಿರೇಮಠ, ರಶ್ಮಿತಾ ಆರ್ ಗೌಡ‌ ಮೊದಲಾದವರು.
ರೇಟಿಂಗ್: 4/5

ಎರಡನೇ ಕ್ಲಾಸ್ ಮಾತ್ರ ಕಲಿತ ಹುಡುಗ ಇದೀಗ ಮದುವೆ ವಯಸ್ಸಿಗೆ ಬಂದಿದ್ದಾನೆ. ಹೆಸರು ಅರಸಯ್ಯ. ಆತನ ಮನೆಗೆ ಏಕೈಕ ಪುತ್ರನಾಗಿ ಹೆಸರಿಗೆ ತಕ್ಕಂತೆ ಅರಸನೇ. ಆದರೆ ಸರಿಯಾಗಿ ಕಿವಿ ಕೇಳಿಸದ, ಆಕರ್ಷಕ ರೂಪ ಇಲ್ಲದ ಅರಸಯ್ಯ ಅಂದರೆ ಯಾವ ಹುಡುಗಿಯೂ ಮದುವೆಗೆ ಒಪ್ಪುವುದಿಲ್ಲ. ಒಂದು ವೇಳೆ ಹುಡುಗಿ ಮತ್ತು ಮನೆಯವರಿಗೆ ಒಪ್ಪಿಗೆಯಾದರೆ ಅಂದರೆ ಈ ಅರಸಯ್ಯನಿಗೇನೇ ಇಷ್ಟವಾಗಿರುವುದಿಲ್ಲ. ಇಂಥ ಅರಸಯ್ಯ ಕೊನೆಗೂ ಹುಡುಗಿಯೊಬ್ಬಳ ಹಿಂದೆ ಬೀಳುವ ಕಥೆಯೇ ಅರಸಯ್ಯನ ಪ್ರೇಮ ಪ್ರಸಂಗ.

ಅರಸಯ್ಯ ಮೆಚ್ಚಿದ ಹುಡುಗಿಯ ಹೆಸರು ಕುಮಾರಿ. ನಗುವಿನ ಹಳ್ಳಿಯಿಂದ ಅರಸಯ್ಯನ ಊರಿನ‌ ಪೋಸ್ಟ್ ಆಫೀಸ್ ನಲ್ಲಿ ವೃತ್ತಿಗೆಂದು ನಿತ್ಯ ಬರುತ್ತಾಳೆ. ಕುಮಾರಿ ಹಿಂದೆ ಬಿದ್ದ ಅರಸಯ್ಯನ ಪ್ರೇಮ ಮೊದಲು ಏಕಮುಖವಾಗಿರುತ್ತದೆ. ಕುಮಾರಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುವಷ್ಟು ಹೊತ್ತಿಗೆ ಇಂಟರ್ವಲ್ ಕಳೆದು ಹೋಗಿರುತ್ತದೆ. ಆದರೆ ಎಲ್ಲ ಸಮಸ್ಯೆ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಹೊಸದೊಂದು ಸಮಸ್ಯೆ ಎದ್ದು ನಿಲ್ಲುತ್ತದೆ. ಕಥೆಯಲ್ಲಿನ ಕುತೂಹಲಕ್ಕಿಂತಲೂ ಇಡೀ ಘಟನೆಯನ್ನು ನಿರೂಪಿಸಿರುವ ರೀತಿಗೆ ಪ್ರೇಕ್ಷಕರು‌ ಫಿದಾ ಆಗುತ್ತಾರೆ.

ಅರಸಯ್ಯನ ಪಾತ್ರದಲ್ಲಿ ಮಹಾಂತೇಶ್ ಹಿರೇಮಠ (Mahantesh Hiremath) ಅದ್ಭುತವಾಗಿ‌ ನಟಿಸಿದ್ದಾರೆ. ಮಹಾಂತೇಶ್ ಅವರ ಸಹಜವಾದ ಅಭಿನಯ ಪ್ರೇಕ್ಷಕರ ಮನಗೆಲ್ಲುತ್ತದೆ.

ರಶ್ಮಿತಾ ಗೌಡ (Rashmitha Gowda) ಎನ್ನುವ ನವನಾಯಕಿ ಕುಮಾರಿ ಪಾತ್ರವನ್ನು ನಿಭಾಯಿಸಿರುವ ರೀತಿ ನೋಡಿದರೆ ಈಕೆ ಕನ್ನಡ ಚಿತ್ರರಂಗದ ಭರವಸೆಯ ನಟಿ ಎಂದೇ ಹೇಳಬಹುದು. ಉಳಿದಂತೆ ರಘು ರಾಮನ‌ಕೊಪ್ಪ, ಪಿಡಿ ಸತೀಶ್ಚಂದ್ರ, ಚಂದನ್ ಶಂಕರ್ ಸೇರಿದಂತೆ ಪ್ರತಿಯೊಂದು ಪಾತ್ರಗಳು ಮನದೊಳಗೆ ಸ್ಥಾನ ಪಡೆಯುತ್ತವೆ. ಪ್ರೇಮ ಪ್ರಸಂಗದ ಜೊತೆಗೆ ಒಂದು ಇಡೀ ಹಳ್ಳಿ ಬದುಕನ್ನು ಪ್ರೇಕ್ಷಕರ ಮನದೊಳಗೆ ತುಂಬಬಲ್ಲಂಥ ಚಿತ್ರ ಇದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!