ನಿರ್ಮಾಪಕರು : ಸುಜಾತ ಚಡಗ, ಚಂದ್ರಶೇಖರ್. ಸಿ. ಜಂಬಿಗಿ
ಸಂಗೀತ : ಗಿರೀಶ್ ಹೊತ್ತೂರ್
ಛಾಯಾಗ್ರಹಕ : ಶ್ರೀಹರಿ
ತಾರಾಗಣ : ಎ. ಆರ್ . ರೋಹಿತ್, ದೀಪಿಕಾ ಆರಾಧ್ಯ ,ಆನಂದ್ ನೀನಾಸಂ , ಸತ್ಯ ರಾಜ್ , ನಿಖಿಲ್ ಶ್ರೀಪಾದ್ , ಪ್ರತೀಕ್ ಲೋಕೇಶ್ , ಸೋನಿಯಾ , ಮಧುಮತಿ ಹಾಗೂ ಮುಂತಾದವರು…
ರೇಟಿಂಗ್ : 3.5/5
ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳ, ಹೊಸ ಕಥೆಗಳ ಪ್ರಯೋಗ ನಡೆಯುತ್ತಲೇ ಇರುತ್ತೆ. ಇದೇ ರೀತಿಯ ಹೊಸತನ, ಹೊಸ ಕನಸು ಹೊತ್ತ ನವ ಪ್ರತಿಭೆಗಳ ಚಿತ್ರ ಈ ವಾರ ಬಿಡುಗಡೆಯಾಗಿದೆ.ಆ ಚಿತ್ರದ ಹೆಸರೇ ‘ಆರ’. ಅಶ್ವಿನ್ ವಿಜಯ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಆರ’ ಚಿತ್ರ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.
ಯುಗ ಯುಗಗಳಿಂದಲೂ ದುಷ್ಟ ಶಕ್ತಿಗಳ ವಿರುದ್ಧ ದೈವ ಶಕ್ತಿಗಳ ಸಂಘರ್ಷ ನಿರಂತರವಾಗಿ ಇದ್ದದೆ. ದೈವದ ಕೃಪೆಯಿಂದ ಜನಿಸಿದ ಮುಗ್ಧ ಹುಡುಗನ ಬದುಕಿನಲ್ಲಿ ಎದುರಾಗುವ ಸಂಘರ್ಷಗಳಿಗೆ ಗೆಳೆಯನ ಸಹಕಾರ, ಹಿರಿಯರ ಆಶೀರ್ವಾದ, ಪ್ರೇಯಸಿಯ ಪ್ರೀತಿ, ಮೋಸದ ಗೆಳೆಯರು ಹೀಗೆ ಒಂದಕ್ಕೊಂದು ಕೊಂಡಿಯಂತೆ ಸಾಗುವ ಹಾದಿಯಲ್ಲಿ ಸಸ್ಪೆನ್ಸ್ , ಪ್ರೀತಿ, ದುಷ್ಟ ಶಕ್ತಿ, ದೈವ ಸಂಘರ್ಷದ ಈ ಚಿತ್ರದಲ್ಲಿ ಇದೆ.
ಒಂದು ದಟ್ಟ ಅರಣ್ಯದ ಮಧ್ಯ ಇರುವ ದೈವ. ನಿತ್ಯ ಪೂಜೆ ಮಾಡುತ್ತಾ ದೇವರ ಆಶೀರ್ವಾದದೊಂದಿಗೆ ಊರ ಜನರನ್ನ ಕಾಪಾಡಿಕೊಂಡು ಸಾಗುವ ದೈವ ಭಕ್ತ ನರಸಿಂಹ( ಆನಂದ್ ನೀನಾಸಂ) ತನ್ನ ಸುತ್ತಮುತ್ತಲಿನವರನ್ನು ಹಾಗೂ ದೈವದತ್ತವಾಗಿ ಸಿಕ್ಕ ಮಗು ಆರ(ರೋಹಿತ್) ನನ್ನು ದೈವ ಭಕ್ತಿಯೊಂದಿಗೆ ಬೆಳೆಸುತ್ತಾರೆ. ಆರ ಬಹಳ ನಿಷ್ಠೆ , ಪ್ರಾಮಾಣಿಕತೆಯಿಂದ ದೇವರನ್ನು ಪೂಜೆ ಮಾಡುತ್ತಾ ಹಿರಿಯರ ಆಜ್ಞೆಯನ್ನು ಪಾಲಿಸುತ್ತಿರುತ್ತಾನೆ.
ಹಾಗೆ ಫೋಟೋಗ್ರಾಫರ್ ಆಗಿ ಕೂಡ ತನ್ನ ಕೆಲಸವನ್ನು ಮಾಡುತ್ತಾನೆ. ಒಮ್ಮೆ ನಾಯಕಿ ಮೀರಾ ( ದೀಪಿಕಾ ಆರಾಧ್ಯ) ಳ ಫೋಟೋ ತೆಗೆಯುವ ಸಂದರ್ಭ ಎದುರಾಗುತ್ತದೆ. ನಂತರ ಮೀರಾ ಸ್ನೇಹ ಪರಿಚಯದೊಂದಿಗೆ ಆರ ನನ್ನ ಪ್ರೀತಿಸಲು ನಿರ್ಧರಿಸುತ್ತಾಳೆ. ಒಮ್ಮೆ ‘ಆರ’ ನ ಬಗ್ಗೆ ಗೆಳೆಯ ಪುಟ್ಟನ ಬಳಿ ವಿಚಾರಿಸ್ದಾಗ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ.
ಕಾಡಿನಲ್ಲಿ ದುಷ್ಟ ವ್ಯಕ್ತಿಗಳು ಇಡೀ ಬೆಟ್ಟವನ್ನು ಆಕ್ರಮಿಸಲು ಸಂಚನ ರೂಪಿಸಿರುತ್ತಾರೆ. ಅದಕ್ಕಾಗಿ ಸಮಯವನ್ನು ಕಾಯುತ್ತಾ ಕೊಲೆ ಮಾಡಲು ಕೂಡ ಯೋಚನೆ ಮಾಡಿರುತ್ತಾರೆ. ಯಾರ ತಂಟೆಗೂ ಹೋಗದ ಆರ ನಿಗೆ ದುಷ್ಟ ವ್ಯಕ್ತಿಗಳ ಕಾಟ, ದೇವರ ರಕ್ಷಣೆಯು ಇಲ್ಲವೆಂದು ಬೇಸತ್ತು ಕಣ್ಣೀರಿಟ್ಟು , ಮನೆಯ ಹಿರಿಯ ವ್ಯಕ್ತಿಯ ಒಪ್ಪಿಗೆ ಪಡೆದು ಬದುಕಲು ಒಂದಷ್ಟು ಹಣವನ್ನು ಪಡೆದು ಕಾಡುಬಿಟ್ಟು ಬೆಂಗಳೂರಿಗೆ ಸೇರ್ತಾನೆ.
ಅಲ್ಲಿ ಸಿಗುವ ಗೆಳೆಯರು ಆರ ನನ್ನ ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಅದಕ್ಕೂ ಒಂದು ಕಾರಣವಿದ್ದು, ಮೋಜು , ಮಸ್ತಿ , ಐಶಾರಾಮಿ ಜೀವನ ನೋಡುವ ಆರ ಬದುಕಿನ ನಲುವಿನ ಜೊತೆ ನೋವನ್ನು ಕೂಡ ಅನುಭವಿಸುತ್ತಾನೆ ಇಲ್ಲಿಂದ ಅವನ ಬದುಕಿನ ದಿಕ್ಕು ಬದಲಾಗುತ್ತಾ ಹೋಗುತ್ತದೆ.
ಮೊದಲ ಪ್ರಯತ್ನವಾಗಿ ನಿರ್ದೇಶಕ ಅಶ್ವಿನ್ ವಿಜಯಮೂರ್ತಿ ಕುತೂಹಲದ ಕಥಾ ವಸ್ತುವಿನೊಂದಿಗೆ ದುಷ್ಟರು ಹಾಗೂ ದೈವಭಕ್ತರು ನಡುವಿನ ಸಮರ ಹಾಗೂ ಕಾಡು ಸಂರಕ್ಷಣೆ , ಪ್ರೀತಿ , ಗೆಳೆತನ , ಹಣದ ವ್ಯಾಮೋಹ ಏನೆಲ್ಲಾ ಮಾಡಿಸುತ್ತದೆ ಎಂಬುದನ್ನು ತೆರೆಯ ಮೇಲೆ ಇಟ್ಟಿದ್ದಾರೆ.
ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು, ಕಾಂತಾರ ಚಿತ್ರದ ಛಾಯೆ ಕಾಣುತ್ತದೆ. ನಿಧಾನಗತಿಯಲ್ಲಿ ಸಾಗಿದರು ಆಧ್ಯಾತ್ಮಿಕ ಥ್ರಿಲ್ಲರ್ ರೂಪ ಹೊಂದಿರುವ ಪಯಣ ಒಮ್ಮೆ ನೋಡುವಂತಿದೆ. ಈ ಚಿತ್ರದಲ್ಲಿ ನಾಯಕನಿಗೆ ಅಭಿನಯಿಸಿರುವ ರೋಹಿತ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡು ದೈವಿಕ ಕಳೆಯನ್ನು ಹೊಂದಿರುವ ಮುಗ್ಧನಾಗಿ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಮುಂದೆ ಉತ್ತಮ ಭವಿಷ್ಯವಿರುವ ಪ್ರತಿಭೆಯಾಗಿ ಕಾಣುತ್ತಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ದೀಪಿಕಾ ಆರಾಧ್ಯ ನೋಡಲು ಮುದ್ದಾಗಿ ಪರದೆಯ ಮೇಲೆ ಕಾಣುತ್ತಾ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಈ ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿರುವ ಆನಂದ್ ನಿನಾಸಂ ಸಂಪೂರ್ಣ ಚಿತ್ರವನ್ನು ಆವರಿಸಿಕೊಂಡಂತೆ ಕಾಣುತ್ತಾರೆ.
ಅದೇ ರೀತಿ ಸತ್ಯ ರಾಜ್ ಕೂಡ ಕ್ರಿಸ್ತ ಎಂಬ ಖಳನಾಯಕ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಇನ್ನು ನಾಯಕನ ಗೆಳೆಯ , ಗೆಳತಿಯ ಪಾತ್ರದಾರಿಗಳು ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ಗಮನ ಸೆಳೆಯುತ್ತದೆ. ಇದು ಒಬ್ಬ ಹುಡುಗನ ಸುತ್ತ ನಡೆಯುವ ಕುತೂಹಲ ಮೂಡಿಸುವ ಆಧ್ಯಾತ್ಮಿಕ ಕಥೆಯಾಗಿದ್ದು, ಒಮ್ಮೆ “ಆರ” ಚಿತ್ರವನ್ನು ನೋಡುವಂತಿದೆ.
Be the first to comment