ವಿಭಿನ್ನ ನಟನೆಯ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೆಸರು ಮಾಡಿದ್ದ ನಟ ಸಂಚಾರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ತಲೆದಂಡ’ ಬಿಡುಗಡೆಗೆ ಸಜ್ಜಾಗಿದ್ದು ಏಪ್ರಿಲ್ 1ರಂದು ತೆರೆಗೆ ಬರಲಿದೆ.
‘ತಲೆದಂಡ’ ಸಿನಿಮಾ ಭಿನ್ನ ಕಥಾಹಂದರದ ಸಿನಿಮಾ ಆಗಿದೆ. ಪ್ರವೀಣ ಕೃಪಾಕರ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಈ ಭೂಮಿಯನ್ನು ಹೇಗೆಲ್ಲಾ ಬಳಸಿಕೊಂಡು ಭೂಮಿಯ ಮೇಲೆ ಶೋಷಣೆ ಮಾಡುತ್ತಿದ್ದಾನೆ ಎನ್ನುವ ಎಳೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸಂಚಾರಿ ವಿಜಯ್ ಸೋಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ ‘ಕುನ್ನ’ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯ್ ಸವಾಲೆನಿಸುವ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಬ್ಬು ಹಲ್ಲಿನ ಯುವಕ ಆಗಿ ನಟಿಸಿದ್ದಾರೆ.
ವಿಜಯ್ ಅಕಾಲಿಕವಾಗಿ ಸಾಯುವುದಕ್ಕೂ ಮುನ್ನ ಈ ಸಿನಿಮಾದ ಡಬ್ಬಿಂಗ್ ಮುಗಿಸಿದ್ದರು. ವಿಜಯ್ಗೆ ನಾಯಕಿಯಾಗಿ ಚೈತ್ರಾ ಆಚಾರ್ ನಟಿಸಿದ್ದಾರೆ. ರಂಗಾಯಣ ರಘು ಪತ್ನಿ ಮಂಗಲಾ ಈ ಸಿನಿಮಾದಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಮಂಡ್ಯ ರಮೇಶ್ ಅವರು ಎಂ ಎಲ್ ಎ ದೊಡ್ಡ ರಂಗ ಆಗಿ ಕಾಣಿಸಿಕೊಂಡಿದ್ದಾರೆ.
‘ತಲೆದಂಡ’ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ. ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಅವರು ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಸಂಚಾರಿ ವಿಜಯ್ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತಿದ್ದೇನೆ. ಅವರಿಲ್ಲ ಅನ್ನುವುದನ್ನು ನಂಬಲು ಆಗುತ್ತಿಲ್ಲ. ಹೈದರಾಬಾದ್ನಲ್ಲಿ ನಡೆದ ಅವಾರ್ಡ್ ಫಂಕ್ಷನ್ನಲ್ಲಿ ನಾವು ಭೇಟಿಯಾಗಿದ್ದೆವು. ಆಗ ಅವರು ನನ್ನ ಅಭಿಮಾನಿ ಎಂದು ಹೇಳಿದಾಗ ಧನ್ಯನಾಗಿದ್ದೆ. ಅವರ ಮುಂದಿನ ಸಿನಿಮಾವನ್ನು ನೋಡಿ ಅಭಿಪ್ರಾಯವನ್ನು ತಿಳಿಸುವಂತೆ ಹೇಳಿದ್ದರು. ಅದೇ ಅವರ ಕೊನೆಯ ಸಿನಿಮಾ ಎಂದು ಯಾರಿಗೆ ಗೊತ್ತಿತ್ತು. ಚಿತ್ರಮಂದಿರದಲ್ಲಿ ಅವರ ಸಿನಿಮಾ ನೋಡುವುದರ ಮೂಲಕ ಸವಿ ನೆನಪುಗಳನ್ನು ಸಂಭ್ರಮಿಸೋಣ. ಅವರ ಹಾರ್ಡ್ ವರ್ಕ್ ಹಾಗೂ ಪ್ರತಿಭೆಯನ್ನು ನಾವೆಷ್ಟು ಪ್ರೀತಿಸಿದ್ದೇವೆ ಎನ್ನುವುದನ್ನು ತಿಳಿಯಲು ಅವರು ಕಾಯುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ” ಎಂದು ಫೇಸ್ಬುಕ್ನಲ್ಲಿ ಮಮ್ಮುಟ್ಟಿ ಬರೆದಿದ್ದಾರೆ. _________

Be the first to comment