ಪುನೀತ್ ಅವರ ನಡವಳಿಕೆ ಮತ್ತು ಅವರು ಸಮಾಜದ ಮೇಲೆ ಬಿಟ್ಟ ಆಳವಾದ ಪ್ರಭಾವದ ಕುರಿತು ಹೇಳಲು ಪ್ರಯತ್ನಿಸುವ ‘ಅಪ್ಪು ಟ್ಯಾಕ್ಸಿ’ ಚಿತ್ರ ಘೋಷಣೆ ಮಾಡಲಾಗಿದೆ.
ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಹುಟ್ಟುಹಬ್ಬದಂದು ದಿಲೀಪ್ ಕುಮಾರ್ ಎಚ್‌ಆರ್ ತಮ್ಮ ಮುಂಬರುವ ಚಿತ್ರ ‘ಅಪ್ಪು ಟ್ಯಾಕ್ಸಿ’ಯನ್ನು ಘೋಷಿಸಿದ್ದಾರೆ. ಸ್ಕೈಲೈನ್ ಮ್ಯೂಸಿಕ್‌ನ ಸಹಯೋಗದೊಂದಿಗೆ ಚಿತ್ರ ನಿರ್ಮಾಣವಾಗಲಿದೆ.
ಅನುಭವಿ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ಜಗ್ಗು ಸಿರ್ಸಿ ‘ಅಪ್ಪು ಟ್ಯಾಕ್ಸಿ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಾಲಿವುಡ್‌ನಲ್ಲಿ ತರಬೇತಿ ಪಡೆದ ತಾಂತ್ರಿಕ ತಜ್ಞ ಶಾಮ್ ರೇ ಅನಿಮೇಟೆಡ್ ಗ್ರಾಫಿಕ್ಸ್ ನೋಡಿಕೊಳ್ಳುತ್ತಾರೆ. ಬರಹಗಾರ ವೈದ್ ಬರೆದ ಚಿತ್ರಕಥೆಯು ಪುನೀತ್ ಅವರ ಪರಂಪರೆಯ ಆಳ ಮತ್ತು ಸೌಂದರ್ಯವನ್ನು ತೆರೆ ಮೇಲೆ ತರುವ ಗುರಿಯನ್ನು ಹೊಂದಿದೆ.
‘ಅಪ್ಪು ಟ್ಯಾಕ್ಸಿ’ ಚಿತ್ರ ಪುನೀತ್ ಪ್ರತಿನಿಧಿಸಿದ ಮೌಲ್ಯಗಳು ಮತ್ತು ಆದರ್ಶಗಳ ಮೂಲಕ, ಮನುಷ್ಯನ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುವ ಟ್ಯಾಕ್ಸಿ ಚಾಲಕನ ಪ್ರಯಾಣದ ಕುರಿತು ಹೇಳುತ್ತದೆ . ಪುನೀತ್ ತನ್ನ ಕಾರ್ಯ ಮತ್ತು ಮಾತುಗಳ ಮೂಲಕ ಅನೇಕರ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದರು ಎಂಬುದನ್ನು ತೋರಿಸುತ್ತದೆ.
ಚಿತ್ರವನ್ನು ಬಹುಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 2025ರ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ.

Be the first to comment