ಕ್ಷಮೆ ಕೇಳಿದ ಅಕ್ಷಯ್ ಕುಮಾರ್

ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅಭಿಮಾನಿಗಳ ಅಸಮಾಧಾನಕ್ಕೆ ತುತ್ತಾಗಿದ್ದು, ಕ್ಷಮೆ ಕೋರಿದ್ದಾರೆ.

‘ವಿಮಲ್​ ಪಾನ್​ ಮಸಾಲ’ ಜಾಹೀರಾತಿನಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದು, ಆ ಜಾಹೀರಾತು ಪ್ರಸಾರ ಶುರುವಾದಾಗಿನಿಂದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಕ್ಷಯ್​ ಕುಮಾರ್​ ಈ ರೀತಿ ಗುಟ್ಕಾ ಜಾಹೀರಾತಿನಲ್ಲಿ ನಟಿಸಿರುವುದು ಸರಿಯಲ್ಲ ಎಂದು ಜನರು ಕಮೆಂಟ್​ ಮಾಡಿದ್ದು, ಅದರ ಬೆನ್ನಲ್ಲೇ ಅಕ್ಷಯ್​ ಕುಮಾರ್​ ವಿಮಲ್​ ಜಾಹೀರಾತಿನಲ್ಲಿ ಮುಂದೆ ನಟಿಸುವುದಿಲ್ಲ ಎಂದು ಹೇಳಿಕೆ ನೀಡಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ಈ ಹಿಂದೆ ಅಕ್ಷಯ್​ ಕುಮಾರ್​ ‘ಸ್ವಸ್ಥ ಭಾರತ’ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ನನಗೆ ದೊಡ್ಡ ಗುಟ್ಕಾ ಕಂಪನಿಗಳಿಂದ ಆಫರ್​ ಬರುತ್ತಿದೆ. ಜಾಹೀರಾತಿನಲ್ಲಿ ನಟಿಸಿದರೆ ನನಗೆ ಭಾರಿ ಪ್ರಮಾಣದ ಸಂಭಾವನೆ ನೀಡಲು ರೆಡಿ ಇದ್ದಾರೆ. ಆದರೆ ನಾನು ಅಂಥ ತಪ್ಪು ಕೆಲಸ ಮಾಡುವುದಿಲ್ಲ’ ಎಂದು ಹೇಳಿದ್ದರು. ಈ ಮಾತನ್ನು ಜನರು ನೆನಪಿಸಿ ಹಳೇ ವಿಡಿಯೋವನ್ನು ಅಕ್ಷಯ್​ ಕುಮಾರ್​ಗೆ ಶೇರ್​ ಮಾಡಿದ್ದಾರೆ.

ಜನರಿಂದ ವಿರೋಧ ವ್ಯಕ್ತವಾದ ಬಳಿಕ ಅಕ್ಷಯ್​ ಕುಮಾರ್​ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಈ ಬಗ್ಗೆ ಬಹಿರಂಗವಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ನನ್ನನ್ನು ಕ್ಷಮಿಸಿ.. ಎಲ್ಲ ಅಭಿಮಾನಿಗಳು ಮತ್ತು ಹಿತೈಷಿಗಳಲ್ಲಿ ನಾನು ಕ್ಷಮೆ ಕೇಳುತ್ತೇನೆ. ಕಳೆದ ಕೆಲವು ದಿನಗಳಿಂದ ನೀವು ನೀಡಿದ ಪ್ರತಿಕ್ರಿಯೆಗಳು ನನ್ನಲ್ಲಿ ಆಳವಾದ ಪರಿಣಾಮ ಬೀರಿವೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ವಿಮಲ್​ ಜೊತೆ ನಾನು ಕೈ ಜೋಡಿಸಿರುವುದರ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು ನಾನು ಗೌರವಿಸುತ್ತೇನೆ. ಒಳ್ಳೆಯ ಉದ್ದೇಶಕ್ಕೆ ಇದರ ಸಂಭಾವನೆಯನ್ನು ನೀಡಲು ನಿರ್ಧರಿಸಿದ್ದೇನೆ. ಈಗಾಗಲೇ ಮಾಡಿಕೊಂಡ ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರ್ಯಾಂಡ್​ನವರು ಆ ಜಾಹೀರಾತನ್ನು ಪ್ರಸಾರ ಮಾಡಬಹುದು. ಆದರೆ ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸುತ್ತೇನೆ. ಸದಾ ನಿಮ್ಮ ಪ್ರೀತಿ ಮತ್ತು ಹಾರೈಕೆ ಬಯಸುತ್ತೇನೆ’ ಎಂದು ಅಕ್ಷಯ್​ ಕುಮಾರ್ ಟ್ವೀಟ್ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!