ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಅಪರಿಚಿತೆ ಚಿತ್ರ ಏಪ್ರಿಲ್ 3ರಂದು ರಾಜ್ಯದಾದ್ಯಂತ ತೆರೆಗೆ ಬರಲಿದೆ.
ಈ ಹಿಂದೆ ತಾಯವ್ವ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ನಿರ್ಮಿಸಿದ್ದ ಗೀತಪ್ರಿಯ ಸುರೇಶ್ ಕುಮಾರ್ ಅವರು ಚಿತ್ರದಲ್ಲಿ ನಟಿಸಿದ್ದಾರೆ. ವಿಶ್ವನಾಥ್ ಅವರು ಕಥೆ, ಚಿತ್ರಕಥೆ ಹಾಗೂ ನಿರ್ದೇಶನವನ್ನು ಮಾಡಿದ್ದಾರೆ. ಗೀತಪ್ರಿಯ ಅವರ ಪತಿ ಸುರೇಶ್ ಕುಮಾರ್ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.
ಅಪರಿಚಿತೆ ಚಿತ್ರದಲ್ಲಿ ಒಬ್ಬ ಜವಾಬ್ದಾರಿಯುತ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಳ್ಳಿಗಳಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುತ್ತಾರೆ. ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರದ ಬಗ್ಗೆ ವಿಶ್ವನಾಥ್ ಅವರು ಹೇಳಿದಾಗ ಈ ಚಿತ್ರದಲ್ಲಿ ನಟಿಸಲು ಮುಂದಾದೆ ಎಂದು ಗೀತಪ್ರಿಯ ಹೇಳಿದ್ದಾರೆ.

ಚಿತ್ರವನ್ನು ರಾಮನಗರದಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಸಾಮಾಜಿಕ ಸಮಸ್ಯೆ ಬಗ್ಗೆ ಮಾತನಾಡುವ ಈ ಚಿತ್ರ ನೈಜ ಘಟನೆ ಆಧಾರಿತವಾಗಿದೆ. ಸಮಾಜಕ್ಕೆ ಸಂದೇಶ ನೀಡುವ ಚಿತ್ರ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿತ್ರದ ನಿರ್ದೇಶಕ ವಿಶ್ವನಾಥ್ ಅವರು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಪ್ರಗತಿಯಲ್ಲಿದೆ. ಹಿರಿಯ ನಟ ಶ್ರೀನಾಥ್, ಅವರ ಮಗ ರೋಹಿತ್, ಸಿಂಧೂ ಲೋಕನಾಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದಿದ್ದಾರೆ.
ನಟ ಶ್ರೀನಾಥ್ ಅವರು, ಮಗನ ಜೊತೆಗೆ ಚಿತ್ರದಲ್ಲಿ ನಟಿಸಿರುವುದು ಖುಷಿ ನೀಡಿದೆ ಎಂದು ಹೇಳಿದ್ದಾರೆ.
ಅಮರ್ ಫಿಲಂಸ್ ಲಾಂಛನದಲ್ಲಿ ಚಿತ್ರ ನಿರ್ಮಾಣ ಆಗಿದೆ. ಚಿತ್ರವನ್ನು ಕೆ ಮುನೀಂದ್ರ ಅವರು ಎಂ ಪಿ ಫಿಲಂಸ್ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ.







Be the first to comment