ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಕನ್ನಡದ ನಟಿ ಅನುಷ್ಕಾ ಶೆಟ್ಟಿ ಅವರು ಮೆಗಾಸ್ಟಾರ್ ಚಿರಂಜೀವಿ ಜೊತೆ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಟಾಲಿವುಡ್ನ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ ಜೊತೆ ಅನುಷ್ಕಾ ಮೊದಲ ಬಾರಿಗೆ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಟಾಲಿವುಡ್ ನಲ್ಲಿ ಸುದ್ದಿ ಕೇಳಿ ಬಂದಿದೆ.
ಬಾಹುಬಲಿ ಸಿನಿಮಾದ ಯಶಸ್ಸಿನ ಬಳಿಕ ಅನುಷ್ಕಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. 2020ರಲ್ಲಿ ತೆರೆಕಂಡ ‘ನಿಶ್ಶಬ್ದಂ’ ಚಿತ್ರದ ನಂತರ ಅವರು ಯಾವುದೇ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಅದಕ್ಕೂ ಹಿಂದೆ ಅವರು 2018ರಲ್ಲಿ ‘ಭಾಗಮತಿ’ಯಲ್ಲಿ ಕಾಣಿಸಿಕೊಂಡಿದ್ದರು. ಈಗ ಅನುಷ್ಕಾ ಅವರ ಮುಂದಿನ ಚಿತ್ರದ ಕುರಿತು ಸುದ್ದಿ ಹರಿದಾಡುತ್ತಿದ್ದು ಅಭಿಮಾನಿಗಳು ಖುಷಿ ಆಗಿದ್ದಾರೆ.
ಇಷ್ಟು ವರ್ಷಗಳಾದರೂ ಅನುಷ್ಕಾ ಶೆಟ್ಟಿ ಅವರು ಚಿರಂಜೀವಿ ಅವರೊಂದಿಗೆ ಹೀರೋಯಿನ್ ಆಗಿ ನಟಿಸಿಲ್ಲ. 2006ರಲ್ಲಿ ತೆರೆಕಂಡ ‘ಸ್ಟಾಲಿನ್’ ಚಿತ್ರದಲ್ಲಿ ಅನುಷ್ಕಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಅನುಷ್ಕಾ ನಟಿಸಿದ ‘ರುದ್ರಮ್ಮದೇವಿ’ ಚಿತ್ರವನ್ನು ಚಿರಂಜೀವಿ ನಿರೂಪಿಸಿದ್ದರು. ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅನುಷ್ಕಾ ರಾಣಿ ಲಕ್ಷ್ಮಿ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಆದರೆ ಇಬ್ಬರು ಒಟ್ಟಾಗಿ ಪ್ರಮುಖ ಪಾತ್ರದಲ್ಲಿ ನಟಿಸಿಲ್ಲ.
ಹೊಸ ಚಿತ್ರಕ್ಕೆ ಹೆಸರಾಂತ ನಿರ್ಮಾಪಕರು ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ. ಸದ್ಯ ಚಿರಂಜೀವಿ ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ದಲ್ಲಿ ನಟಿಸುತ್ತಿದ್ದಾರೆ. ‘ಗಾಡ್ಫಾದರ್’ ಹಾಗೂ ‘ಭೋಲಾ ಶಂಕರ್’ನಲ್ಲೂ ಅವರು ಅಭಿನಯಿಸುತ್ತಿದ್ದಾರೆ. ಬಳಿಕವಷ್ಟೇ ಅನುಷ್ಕಾ ಜೊತೆಗಿನ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಲಾಗಿದೆ.
___
Be the first to comment