ಅಂಶು

ಟ್ರೈಲರ್ ಮೂಲಕ ಬೆರಗು ಮೂಡಿಸಿದ ಸೈಕ್ಯಾಡೆಲಿಕ್ ಥ್ರಿಲ್ಲರ್ ಅಂಶು!

ಸಾಮಾಜಿಕ ಪಲ್ಲಟಗಳಿಗೆ ಕಣ್ಣಾದ ಕಥೆ ಹೊಂದಿರುವ ಚಿತ್ರಗಳೆಂದರೆ ಕನ್ನಡದ ಪ್ರೇಕ್ಷಕರಲ್ಲಿ ಒಂದು ಬಗೆಯ ಸೆಳೆತವಿದೆ. ಅಂಥಾದ್ದೊಂದು ಕಥೆ ಭಿನ್ನ ಜಾನರಿನಲ್ಲಿ, ಪಕ್ಕಾ ಕಮರ್ಶಿಯಲ್ ಬಗೆಯಲ್ಲಿ ರೂಪುಗೊಂಡಿದೆಯೆಂದರೆ ಅಂಥಾ ಸೆಳೆತ ಮತ್ತಷ್ಟು ತೀವ್ರವಾಗಿರುತ್ತದೆ. ಸದ್ಯ ಬಿಡುಗಡೆಗೊಂಡಿರುವ ‘ಅಂಶು’ ಚಿತ್ರದ ಟ್ರೈಲರ್ ನಲ್ಲಿಯೂ ಅಂಥಾದ್ದೊಂದು ಸೆಳೆತವಿದ್ದಂತಿದೆ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ‘ಅಂಶು’ ಮಹಿಳಾ ಪ್ರಧಾನ ಕಥಾನಕವನ್ನು ಒಳಗೊಂಡಿರುವ ಚಿತ್ರ. ಅದರ ಒಟ್ಟಾರೆ ಸಾರದತ್ತ ಕುತೂಹಲ ಕೇಂದ್ರೀಕರಿಸುವಂತೆ ಮಾಡುವಲ್ಲಿ ಈ ಟ್ರೈಲರ್ ಯಶ ಕಂಡಿದೆ.

ಈ ಚಿತ್ರದಲ್ಲಿ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ಗಟ್ಟಿಮೇಳ ಸೀರಿಯಲ್ಲಿನ ಅಮೂಲ್ಯಾ ಪಾತ್ರದ ಮೂಲಕ ಮಿಂಚಿದ್ದ ನಿಶಾ ಈ ಟ್ರೈಲರ್‌ನಲ್ಲಿ ಸೀರಿಯಲ್ ಇಮೇಜನ್ನು ಮೀರಿದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಸಿ ಚನ್ನಕೇಶವ ನಿರ್ದೇಶನದ ಚೊಚ್ಚಲ ಚಿತ್ರ ಅಂಶು. ‘ನಾವು ನಂಬೋದೆಲ್ಲ ನಿಜ ಅಲ್ಲ, ಸಹಿಸೋಕ್ ಆಗ್ದೆ ಇರೋದೆಲ್ಲ ಸುಳ್ಳಲ್ಲ’ ಅಂತ ಶುರುವಾಗುವ ಈ ಟ್ರೈಲರ್ ನೋಡಿದ ಮಂದಿಯಲ್ಲಿ ಒಂದಷ್ಟು ಪ್ರಶ್ನೆಗಳು ಮೂಡಿಕೊಂಡಿವೆ. ಅದಕ್ಕುತ್ತರವೆಂಬಂಥಾ, ಬೆರಗಿನ ಸಂಗತಿಗಳನ್ನು ಚಿತ್ರತಂಡ ತೆರೆದಿಟ್ಟಿದೆ. ಅದರ ಪ್ರಕಾರ ಹೇಳೋದಾದರೆ, ಇದೊಂದು ಸೈಕ್ಯಾಡೆಲಿಕ್ ಥ್ರಿಲ್ಲರ್ ಜಾನರಿನ ಚಿತ್ರ. ಈ ಸಮಾಜದಲ್ಲಿ ಇಂದಿನ ದಿನಮಾನದಲ್ಲಿ ಘಟಿಸುತ್ತಿರುವ ವಿಚಾರಗಳನ್ನಿಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ದೃಷ್ಯೀಕರಿಸಲಾಗಿದೆಯಂತೆ. ಅದರ ಆವೇಗ ಎಂಥಾದ್ದಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ಟ್ರೈಲರ್ ಮೂಡಿ ಬಂದಿದೆ.

ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ನಿರ್ಮಾಣ ಕಾರ್ಯದ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಭಜರಂಗಿ೨, ವೇದ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ , ಈಗ ಬಾಲಿವುಡ್ಡಿನಲ್ಲೂ ಸಕ್ರಿಯರಾಗಿರುವ ಚಲುವರಾಜ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಜೈಚಂದ್ರ, ಪ್ರಮೋದ್ ಡಾ.ಮಧುರಾಜ್, ಮತ್ತು ವೀರನ್ ಗೌಡ ಕೂಡಾ ಅಂಶು ನಿರ್ಮಾಣದಲ್ಲಿ ಸಹಭಾಗಿಗಳಾಗಿದ್ದಾರೆ. ಈ ಹಿಂದೆ ಅಂಶು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿತ್ತು. ಲಂಡನ್ನಿನಲ್ಲಿ ಡಾಕ್ಟರ್ ಆಗಿರುವ ಮಧುರಾಜ್ ಅದನ್ನು ನೋಡಿ ಥ್ರಿಲ್ ಆಗಿ ನಿರ್ಮಾಣ ತಂಡಕ್ಕೆ ಸೇರಿಕೊಂಡಿದ್ದರಂತೆ.

ಇನ್ನುಳಿದಂತೆ ನಿರ್ದೇಶಕ ಚನ್ನಕೇಶವ ಸೇಂಟ್ ಜೋಸೆಫ್ಸ್ ಯೂನಿವರ್ಸಿಟಿಯಲ್ಲಿ ಫಿಲಂ ಮೇಕಿಂಗ್ ಕೋರ್ಸ್ ಮುಗಿಸಿಕೊಂಡಿರುವವರು. ಅವರಿಲ್ಲಿ ಸಮಾಜಮುಖಿ ಕಥನವೊಂದಕ್ಕೆ ಕಮರ್ಶಿಯಲ್ ಧಾಟಿಯಲ್ಲಿ ದೃಷ್ಯ ರೂಪ ನೀಡಿದ್ದಾರೆ. ಇನ್ನುಳಿದಂತೆ ದೂಡಿ ಎಂಬ ತಮಿಳು ಚಿತ್ರ, ಕನ್ನಡದ ಗರುಡ ಪುರಾಣ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದ ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಕರಾಗಿ ಈ ಚಿತ್ರ ಭಾಗವಾಗಿದ್ದಾರೆ. ಜಿ.ವಿ ಪ್ರಕಾಶ್, ವಿದ್ಯಾಸಾಗರ್ ಜೊತೆ ಪ್ರೋಗ್ರಾಮರ್ ಆಗಿದ್ದ ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನವ ಪ್ರತಿಭೆ ವಿಘ್ನೇಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಹೇಂದ್ರ ಗೌಡ ಸಂಭಾಷಣೆ ಮತ್ತು, ಸಾಹಿತ್ಯದ ಜವಾಬ್ದಾರಿ ನಿಭಾಯಿಸಿದ್ದಾರೆ. ಇವರು ಬರೆದಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಗೊಂಡು ಕೇಳುಗರ ಮೆಚ್ಚುಗೆ ಪಡೆದುಕೊಂಡಿವೆ. ಇನ್ನುಳಿದ ಮತ್ತೊಂದು ಹಾಡು ಇಷ್ಟರಲ್ಲಿಯೇ ಬಿಡುಗಡೆಗೊಳ್ಳಲಿದೆ. ಅದರ ಬೆನ್ನಲ್ಲಿಯೇ ಅಂಶು ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!