ಅಂದು ಶಿಷ್ಯನ ಚಿತ್ರ. ಇಂದು ಗುರುವಿನ ಚಿತ್ರ

25 ವರ್ಷಗಳ ಹಿಂದೆ ಗಾನಯೋಗಿ ಪಂಚಾಕ್ಷರಿ ಗವಾಯಿ ಚಿತ್ರ ನಿರ್ದೇಶಿಸಿದ ಚಿಂದೋಡಿ ಬಂಗಾರೇಶ್ ಈಗ ಹಾನಗಲ್ಲ ಶ್ರೀ ಕುಮಾರೇಶ ಚಿತ್ರ ನಿರ್ದೇಶನಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ.
ಈ ಚಿತ್ರ ನಿರ್ದೇಶನ ಮಾಡುವುದು ಆಕಸ್ಮಿಕವೆಂದು ಹೇಳುತ್ತಾರೆ.

ಮೌನ ತಪಸ್ವಿ(ನಲವತ್ತು ವರ್ಷಗಳಿಂದ ಮೌನವ್ರತದಲ್ಲಿರುವ) ಶ್ರೀ ಜಡೆಯ ಶಾಂತಲಿಂಗಸ್ವಾಮಿಗಳು ತಮ್ಮ ಆರಾಧ್ಯ ದೈವವಾದ ಕುಮಾರೇಶರ ಜೀವನಚರಿತ್ರೆ ಮಾಡಲು ಈಗ ಮೂರು ವರ್ಷದ ಹಿಂದೆ ನನಗೆ ತಿಳಿಸಿದರು.

ಪಂಚಾಕ್ಷರಿ ಗವಾಯಿಗಳ ಚಿತ್ರ ಮಾಡುವಾಗಲೆ , ಕುಮಾರ ಸ್ವಾಮಿಗಳ ಬಗ್ಗೆ ಓದಿದ್ದ ನನಗೆ ಮತ್ತೆ ಅವರದೆ ಜೀವನ ಚರಿತ್ರೆ ಮಾಡುವ ಯೋಗ ಬಂದಿದ್ದು ನನ್ನ ಪುಣ್ಯವೆಂದು ಭಾವಿಸುತ್ತೇನೆ.
ವರ್ಷಗಳೆಲ್ಲ ಅವರ ಚರಿತ್ರೆ ಓದಿ, ಕುಮಾರಸ್ವಾಮಿಗಳನ್ನು ಆರಾಧಿಸುವ, ಮಹಾಸ್ವಾಮಿಗಳನ್ನ, ಮಠಾಧೀಶರನ್ನ ಸಂಪರ್ಕಿಸಿ, ಅವರ ಆಶೀರ್ವಾದ ಒಪ್ಪಿಗೆ ಪಡೆದು ಚಿತ್ರಕಥೆ ಸಿದ್ಧವಾಗಿ ಈಗ ಅಗಡೀಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ಕಾರ್ಯರೂಪಕ್ಕೆ ಬರಲಿದೆ.

ಕುಮಾರಸ್ವಾಮಿಗಳೆಂದರೆ ಒಬ್ಬ ವ್ಯಕ್ತಿಯಲ್ಲ‌. ಒಂದು ಮಹಾಶಕ್ತಿ. ೧೯ ನೇ ಶತಮಾನದ ಯುಗಪುರುಷ. ಕರುಣಾಮಯಿ, ಅಖಿಲ ಭಾರತ ವೀರಶೈವ ಮಹಾಸಾಭೆಯ ಸಂಸ್ಥಾಪಕ.
ನಾಡಿಗೆ ಸಾವಿರಾರು ಮಠಗಳಿಗೆ ಮಠಾಧೀಶರನಿತ್ತು, ಸಂಗೀತ ಕ್ಷೇತ್ರಕ್ಕೆ ಪಂಚಾಕ್ಷರಿ ಗವಾಯಿ, ಪುಟ್ಟರಾಜ ಗವಾಯಿಗಳಂತಹ ಪುಣ್ಯ ಪುರುಷರನ್ನು ಕೊಟ್ಟು, ಸಾಹಿತ್ಯ, ಜ್ಞಾನ, ವಿದ್ಯೆ, ಭಕ್ತಿ, ಕಾಯಕ, ದಾಸೋಹದ ಮಹಾಮಂತ್ರವನ್ನು‌ ನಿತ್ಯ ಜಪಮಾಲೆಯಾಗಿ ನಿಂತಿರುವ ಶಿವಯೋಗ ಮಂದಿರದ ಸಂಸ್ಥಾಪಕ, ಬಸವತತ್ವದ ಆರಾಧಕ, ಕಾಯಕಯೋಗಿ, ಅಮರಜೀವಿ ಹಾನಗಲ್ಲ ಶ್ರೀ ಕುಮಾರೇಶ.

1906 ರಲ್ಲೇ ಶ್ರಮಜೀವಿಗಳಿಗೆ ಕಾಯಕ ನೀಡಲು ಹತ್ತಿ ಜಿನ್ನಿಂಗ್ ಫ್ಯಾಕ್ಟರಿ, ಕೃಷಿ ಹಾಗೂ ಚಿತ್ರಮಂದಿರ ನಿರ್ಮಿಸಿದ್ದರು. ಇಂತಹ ಮಹಾಪುರುಷರ ಜೀವನ ಚರಿತ್ರೆ ಬೆಳ್ಳಿತೆರೆಗೆ ತರಲು ಪ್ರಯತ್ನಿಸುವೆ.

ಈ ಚಿತ್ರಕ್ಕೆ ಡಾ||ಹಂಸಲೇಖ ಸಂಗೀತ ನೀಡುವರು. ಅದರಲ್ಲೂ ವಿಶೇಷ ಒಂದು ಹಾಡೆಂದರೆ ಭೀಮಕವಿ ವಿರಚಿತ ಬಸವ ಪುರಾಣ ೩೫೦೦ ಸಾಲುಗಳ ಭಾಮಿನಿ ಷಟ್ಪದಿಯಲ್ಲಿ ಇರುವ ಪುರಾಣವನ್ನು ೭-೮ ನಿಮಿಷಗಳಲ್ಲಿ ಬಸವ ಪುರಾಣದ ಹಾಡನ್ನು ಉತ್ಕೃಷ್ಟವಾಗಿ ರಾಗ ಸಂಯೋಜಿಸಲಿದ್ದಾರೆ. ಇದನ್ನು ಶಂಕರ್ ಮಹಾದೇವನ್ ಹಾಡಲಿದ್ದಾರೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬಸವಣ್ಣನವರ ಜೀವನಚರಿತ್ರೆಯ ಹಾಡು ಪ್ರಥಮ. ಇದು ನಿರಂತರ ನೆನಪಾಗಿ ಉಳಿಯಬಲ್ಲದೆಂದು ನಮ್ಮ ಆಶಯ. ಗಂಧದ ಕೊರಡಂತೆ ಸಮಾಜಕ್ಕಾಗಿ ದುಡಿದ ಅವರ ಜೀವನ‌, ಅವರೊಂದಿಗೆ ಇನ್ನೊಂದು ಶಕ್ತಿ ಸಂಗೀತ ವಿದ್ವಾನ್ ಬಾಗಲಕೋಟೆ ಮಲ್ಲಾಣಾರ್ಯರ ಪಾತ್ರ ಚಿತ್ರಕ್ಕೆ, ಸಮಾಜಕ್ಕೆ ಎರಡು ಶಕ್ತಿಗಳ ಪರಿಚಯ.

ಈ ಎರಡು ಪಾತ್ರವನ್ನು ಮಾಡುವ ಕಲಾವಿದರು ಕನ್ನಡ ನಾಡಿನ ಜನಮಾನಸದಲ್ಲಿ, ಅದರಲ್ಲೂ ಶರಣರ ಸಮೂಹದಲ್ಲಿ ಅಚ್ಚಳಿಯದೆ ಉಳಿಯುವರು. ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆದಿದೆ. ಜೂನ್ ಅಥವಾ ಜುಲೈನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಬಂಗಾರೇಶ್ ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!