ಅಂಧ ಮಕ್ಕಳಿಂದ ‘ಕವಚ’ ಟೀಸರ್ ಲಾಂಚ್

‘ಕವಚ’. ನಿರ್ದೇಶಕ ಜಿವಿಆರ್ ವಾಸು ಪ್ರಥಮ ಬಾರಿ ಡೈರೆಕ್ಟ್ ಮಾಡುತ್ತಿರುವ ಈ‌ ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕ. ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ ಜೆ.ಪಿ‌ನಗರದ ರಮಣ ಮಹರ್ಷಿ ಅಂಧರ ಅಕಾಡೆಮಿಯಲ್ಲಿ ನೆರವೇರಿತು. ಟೀಸರ್ ಲಾಂಚ್ ಮಾಡಿದ ಅಂಧ ಮಕ್ಕಳು ‌ತಮಗೆ ಶಿವಣ್ಣನ ಗೋಲ್ಡನ್ ವಾಯ್ಸ್ ಆಲಿಸುವ ಅವಕಾಶ ಇದು ಎಂದು ಖುಷಿ ಪಟ್ಟರು.

ಶಿವಣ್ಣ ಎಂದರೆ ಹನುಮಂತನಂತೆ. ಪಾತ್ರಕ್ಕೆ ಬೇಕಾದ ಹಾಗೆ ತಮ್ಮ ಆಕಾರ ಬದಲಿಸಬಲ್ಲರು ಎಂದು ಪ್ರಶಂಸಿಸಿದ್ದು ನಿರ್ದೇಶಕ ಜಿವಿಆರ್ ವಾಸು. ನಟಿ ಕೃತ್ತಿಕಾ ಕನ್ನಡದಲ್ಲಿ ಇದು ನನ್ನ ಎರಡನೇ ಚಿತ್ರ. ಇದು ನಿಜಕ್ಕೂ ನನಗೆ ಲಭಿಸಿರುವ ದೊಡ್ಡ ಅವಕಾಶ’ ಎಂದರು.

ಜಯನಗರ ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ ನನ್ನ ತಂದೆ ಡಾ.ರಾಜಕುಮಾರ್ ಅವರ ಅಭಿಮಾನಿ. ಅವರು ನನ್ನ ತಮ್ಮನಿಗೆ ಶ್ರೀರಾಜ್ ಕುಮಾರ್ ಎಂದು ಹೆಸರಿಟ್ಟಿದ್ದಾರೆ. ನಾನು ಶಿವರಾಜ್ ಕುಮಾರ್ ಅವರ ಫ್ಯಾನ್. ಅವರ ಚಿತ್ರದ ಟೀಸರ್ ಲಾಂಚ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದ್ದಕ್ಕೆ ಖುಷಿಯಿದೆ ಎಂದರು.ಶಿವರಾಜ್ ಕುಮಾರ್ ಅವರ ವರ್ಸಟಾಲಿಟಿ ಬಗ್ಗೆ ಪ್ರಶಂಸೆ ಮಾಡಿದ್ದು  ಧನಂಜಯ್. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಅವರು ‘ಜೊತೆಗಿರುವವರನ್ನು  ಕೈ ಹಿಡಿದು ಪ್ರೋತ್ಸಾಹಿಸುವ ಅವರ ಗುಣ ದೊಡ್ಡದು. ಅವರ ಸಿನಿಮಾದಿಂದಲೇ ನನಗೆ ಬ್ರೇಕ್ ಸಿಕ್ಕಿದೆ. ನನಗೆ ನಾಯಕಿಯಾಗಿ ಚಿತ್ರರಂಗಕ್ಕೆ ಆಗಮಿಸಿದ್ದ ಕೃತಿಕಾಗೂ ಇದೀಗ ಶಿವಣ್ಣನ ಸಿನಿಮಾವೇ ಬ್ರೇಕ್ ನೀಡುತ್ತೆ. ಅದು ಖಚಿತ’ ಎಂದರು.ಇತಿ ಆಚಾರ್ಯ ಪಂಜಾಬಿ ಮೂಲತಃ ಗುಜರಾತಿನ ಚೆಲುವೆ ಇತಿ ಆಚಾರ್ಯ ಚಿತ್ರದಲ್ಲಿ ತಮ್ಮದು ಪಂಜಾಬಿ ಹುಡುಗಿಯ ಪಾತ್ರ ಎಂದರು.

ಸಾಮಾನ್ಯವಾಗಿ ನನ್ನ ಸಿನಿಮಾಗಳಲ್ಲಿ ಸೆಂಟಿಮೆಂಟ್ , ಆ್ಯಕ್ಷನ್ ಇದ್ದೇ ಇರುತ್ತವೆ. ಆದರೆ ಇದು ಒಬ್ಬ ಅಂಧನ ಕತೆ. ಹಾಗಾಗಿ ಕಲಾತ್ಮಕ ಅಂಶಗಳಷ್ಟೇ ಉಳ್ಳ ಚಿತ್ರ ಎಂಬ ಕಲ್ಪನೆ ಬೇಡ. ಆ್ಯಕ್ಷನ್ ಕೂಡ ಇದೆ ಎಂದರು ಶಿವಣ್ಣ. ಚಿತ್ರದಲ್ಲಿ ರಮೇಶ್ ಭಟ್, ಗಿರಿಜಾ ಲೋಕೇಶ್ ಮೊದಲಾದ ಕಲಾವಿದರ ದಂಡೇ ಇದೆ. ಜೊತೆಗೆ ಮೀನಾಕ್ಷಿ ಎನ್ನುವ ಅದ್ಭುತ ಬಾಲನಟಿ ಇದ್ದಾಳೆ. ಅವಳ ಜೊತೆಗೆ ನಟಿಸುವುದೇ ಪುಣ್ಯ ಎಂದು‌ ನುಡಿದರು ಶಿವರಾಜ್ ಕುಮಾರ್.

ಈ ಸಂದರ್ಭದಲ್ಲಿ ಚಿತ್ರದಿಂದ ಆಚೆ ಒಂದು ಸಂದೇಶ ನೀಡಿದ ಶಿವಣ್ಣ ‘ನಾವು ಸಾಯುವಾಗ ನಮ್ಮ ಕಣ್ಣು ಇತರರಿಗೆ ಕವಚವಾಗಿರಲಿ’ ಎನ್ನುವ ಮೂಲಕ ಮರಣಾನಂತರ ಕಣ್ಣುದಾನ  ಮಾಡಬೇಕುನ್ನುವ ಆಶಯ ವ್ಯಕ್ತಪಡಿಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!