ನಿರ್ದೇಶನ: ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ
ನಿರ್ಮಾಣ: ರಾಮಚಂದ್ರ, ಅದ್ವೈತ್ ಪ್ರಭಾಕರ್
ತಾರಾಗಣ: ಅರ್ಜುನ್ ಜೋಗಿ, ಸಾರಿಕಾ ರಾವ್, ಗೌರೀಶ್ ಅಕ್ಕಿ, ನಂದಗೋಪಾಲ್ ಇತರರು.
ರೇಟಿಂಗ್: 3/5
ಕೊಲೆ ಹಾಗೂ ಪ್ರೀತಿಯ ಜೊತೆಗೆ ಸಾಗುವ ಕೌಟುಂಬಿಕ ಸಸ್ಪೆನ್ಸ್ ಚಿತ್ರ ಅನಾವರಣ ಈ ವಾರ ತೆರೆ ಕಂಡು ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಈ ಚಿತ್ರವನ್ನು ಇಬ್ಬರು ನಿರ್ದೇಶಕರು ನಿರ್ದೇಶನ ಮಾಡಿದ್ದಾರೆ. ಒಬ್ಬೆಸಿವ್ ಲವ್ ಡಿಸ್ಆರ್ಡರ್ ಎನ್ನುವ ವಿಚಿತ್ರ ಮನೋ ಕಾಯಿಲೆ ಎನ್ನಬಹುದಾದ ಸಮಸ್ಯೆಯಿಂದ ಇತರರಿಗೆ ಉಂಟಾಗುವ ತೊಂದರೆಯ ಜೊತೆಗೆ ಕೊಲೆಯ ಸುತ್ತ ನಡೆಯುವ ಕಥಾಹಂದರ ಚಿತ್ರದಲ್ಲಿದೆ.
ಮಹಿಳೆಯೊಬ್ಬರ ಕೊಲೆಯಾದ ದೇಹ ಪತ್ತೆಯಾಗುವ ಮೂಲಕ ಚಿತ್ರ ಆರಂಭವಾಗುತ್ತದೆ. ಸ್ಥಳಕ್ಕೆ ಭೇಟಿ ನೀಡುವ ಪೊಲೀಸ್ ಇನ್ಸ್ಪೆಕ್ಟರ್ ನಂದಗೋಪಾಲ್ , ಕೊಲೆಯಾದ ಮಹಿಳೆ ವಾಸ್ತುಶಿಲ್ಪಿ ಅರ್ಜುನ್ ಯೋಗಿಯ ಪತ್ನಿ ಸಾರಿಕಾ ರಾವ್ ಎಂದು ಗುರುತಿಸುತ್ತಾರೆ.
ಕೊಲೆ ಪ್ರಕರಣವನ್ನು ಭೇದಿಸುವ ಪೊಲೀಸರಿಗೆ ಮತ್ತೊಂದು ಮಹಿಳೆಯ ಕೊಲೆ ಪ್ರಕರಣ ಎದುರಾಗುತ್ತದೆ. ಈ ನಡುವೆ ಸಾರಿಕಾ ರಾವ್ ಕೊಲೆ ಪ್ರಕರಣವನ್ನು ಭೇದಿಸಲು ಮುಂದಾಗುವ ಪೊಲೀಸರಿಗೆ ಆಶ್ಚರ್ಯ ಕಾದಿರುತ್ತದೆ. ಸಾರಿಕಾ ರಾವ್ ಪತಿ ಅರ್ಜುನ್ ಯೋಗಿ ತನ್ನ ಹೆಂಡತಿ ಸತ್ತಿಲ್ಲ ಎಂದು ವಾದಿಸುತ್ತಾನೆ. ಹಾಗಾದರೆ ಅರ್ಜುನ್ ಯೋಗಿಗೆ ಆಗಿರುವ ಸಮಸ್ಯೆ ಏನು? ಹಾಗಾದರೆ ಕೊಲೆಯಾದವರು ಯಾರು? ಕೊಲೆ ಮಾಡಿದವರು ಯಾರು? ಒಟ್ಟಾರೆ ಚಿತ್ರದ ಅನಾವರಣ ಏನು ಎನ್ನುವುದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು.
ಚಿತ್ರಕ್ಕೆ ಚಿತ್ರಕಥೆ ಒಂದಷ್ಟು ಬಿಗಿಯಾಗುವ ಅಗತ್ಯ ಇತ್ತು. ಸಿನಿ ಆಟೋಗ್ರಾಫಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿದಂತೆ ಕಾಣುವುದಿಲ್ಲ. ಹಾಸ್ಯ ಸನ್ನಿವೇಶಗಳು ಪ್ರೇಕ್ಷಕರನ್ನು ನಗೆ ಕಡಲಿನಲ್ಲಿ ತೇಲಿಸದೆ ಇರುವುದು ನಿರ್ದೇಶಕರು ಎಡವಿದ್ದಾರೆ ಎನ್ನುವುದಕ್ಕೆ ನಿದರ್ಶನ ಆಗಿ ಕಾಣುತ್ತದೆ.
ಒಟ್ಟಾರೆ ಕಲಾವಿದರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅರ್ಜುನ್ ಯೋಗಿ ಉತ್ತಮವಾಗಿ ನಟಿಸಿದ್ದಾರೆ. ಎರಡು ಪಾತ್ರ ನಿರ್ವಹಿಸಿರುವ ಸಾರಿಕಾ ರಾವ್ ಮುದ್ದಾಗಿ ಕಾಣಿಸುತ್ತಾರೆ. ಮುಖ್ಯ ಪಾತ್ರಧಾರಿ ಆಗಿ ಗೌರೀಶ್ ಅಕ್ಕಿ ಓಕೆ ಅನಿಸುತ್ತಾರೆ. ಪೋಷಕ ಪಾತ್ರದಲ್ಲಿ ಹೊನ್ನವಳ್ಳಿ ಕೃಷ್ಣ ಹಾಗೂ ಅರವಿಂದ್ ಅವರು ಉತ್ತಮವಾಗಿ ನಟಿಸುವ ಮೂಲಕ ಚಿತ್ರವನ್ನು ಮೇಲಕ್ಕೆ ಎತ್ತುವ ಯತ್ನ ಮಾಡಿದ್ದಾರೆ.
ಚಿತ್ರದ ಬಗ್ಗೆ ಕೊನೆಯದಾಗಿ ಹೇಳುವುದಾದರೆ ಕ್ರೈಂ ಕಥೆಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ನೋಡಲು ಅಡ್ಡಿಯಿಲ್ಲ ಎನ್ನಬಹುದು.
___
Be the first to comment