ಕಳೆದ 17 ವರ್ಷಗಳಿಂದಲೂ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಶ್ರೀರಾಂಬಾಬು ಅನಾಥಾಲಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಿದ್ದಾರೆ. ಸುವ್ವಾಲಿ ಎಂಬ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಎಸ್.ಆರ್.ವಿ. ಥಿಯೇಟರ್ ನಲ್ಲಿ ನಡೆಯಿತು. ಬಿಜೆಪಿ ಮುಖಂಡ ಮರಿಸ್ವಾಮಿ ಈ ಟೀಸರ್ಗೆ ಚಾಲನೆ ನೀಡಿದರು. ಲಹರಿ ವೇಲು, ಸಾ.ರಾ.ಗೋವಿಂದು, ಎಂ.ಜಿ.ರಾಮಮೂರ್ತಿ, ಕೆ.ಎಂ.ವೀರೇಶ್, ಎನ್.ಎಂ.ಸುರೇಶ್, ಉಮೇಶ್ ಬಣಾಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈಗಷ್ಟೇ ಪಿ.ಯು.ಸಿ. ಓದುತ್ತಿರುವ ಹಾರ್ದಿಕಾ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಮಕ್ಕಳೇ ಅಭಿನಯಿಸಿರುವ ಈ ಚಿತ್ರಕ್ಕೆ ಲೋಕಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀರಾಂಬಾಬು ಅವರೇ ಚಿತ್ರದ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ. ಚಿತ್ರದ ಕುರಿತಂತೆ ಮಾತನಾಡಿದ ಶ್ರೀರಾಂಬಾಬು ಅನಾಥಾಶ್ರಮದಲ್ಲಿ ನಡೆಯುವಂತಹ ಘಟನೆಗಳು ಅಲ್ಲಿನ ಮಕ್ಕಳು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿ ಕೊನೆಗೆ ಪ್ರಧಾನಮಂತ್ರಿಗಳನ್ನು ಭೇಟಿಯಾದರೆ? ಇಲ್ಲವೇ? ಎಂಬುದನ್ನು ನಮ್ಮ ಚಿತ್ರದ ಮೂಲಕ ಹೇಳಲು ಬಯಸಿದ್ದೇವೆ. 27 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಅದರಲ್ಲಿ 21 ದಿನ ರಾತ್ರಿಯೇ ಶೂಟಿಂಗ್ ಮಾಡಿದ್ದೇವೆ. ನಾನು ನೋಡಿದ ಹಾಗೆ ಒಂದಷ್ಟು ಅನಾಥಾಲಯದ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಕೆಲ ವ್ಯಕ್ತಿಗಳು ನೀಡುವ ಭರವಸೆಯನ್ನು ನಂಬಿದ 6 ಜನ ಮಕ್ಕಳು ಅನಾಥಾಲಯದಿಂದ ಹೊರಬಂದಾಗ ರಿಯಾಲಿಟಿ ಅರಿವಾಗುತ್ತದೆ. ಅನಾಥಾಲಯವೇ ಮಿಗಿಲೆಂದು ವಾಪಸ್ ಹೊರಡುವಾಗ ಒಂದು ಭಾಷಣ ಕೇಳಿ ನಾವು ನೇರವಾಗಿ ಪ್ರಧಾನ ಮಂತ್ರಿಗಳನ್ನೇ ಭೇಟಿ ಮಾಡಬೇಕೆಂದು ನಿರ್ಧರಿಸುತ್ತಾರೆ. ಕೊನೆಗೂ ಆ ಮಕ್ಕಳಿಗೆ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಾಯಿತೇ? ಎಂದು ‘ಸುವ್ವಾಲಿ’ ಚಿತ್ರದ ಮೂಲಕ ಹೇಳಿದ್ದೇವೆ ಎಂದು ಹೇಳಿದರು.
ಈ ಚಿತ್ರದಲ್ಲಿ 5 ಹಾಡುಗಳಿದ್ದು ರಾಜೇಶ್ ಕೃಷ್ಣನ್, ನವೀನ್ ಸಜ್ಜು, ಮೇಘನ ಕುಲಕರ್ಣಿ ಹಾಡಿದ್ದಾರೆ. ನಿರ್ದೇಶಕಿ ಹಾರ್ಧಿಕ ಮಾತನಾಡಿ 6 ಜನ ಮಕ್ಕಳು ತಮಗಾಗುತ್ತಿರುವ ತೊಂದರೆಗಳನ್ನು ಸರಿಪಡಿಸಿಕೊಳ್ಳಲು ಅನಾಥಾಲಯದಿಂದ ಹೊರಬಂದಾಗ ಏನೆಲ್ಲಾ ಸಂದರ್ಭಗಳನ್ನು ಎದುರಿಸಿದರು ಎನ್ನುವುದೇ ‘ಸುವ್ವಾಲಿ’ ಚಿತ್ರದ ಕಥೆ. ಈ ಹಿಂದೆ ಕೆಲ ಕಿರುಚಿತ್ರಗಳನ್ನು ಮಾಡಿದ್ದು, ಫಸ್ಟ್ ಟೈಂ ನಿರ್ದೇಶನ ಮಾಡಿದ್ದೇನೆ ಎಂದು ಹೇಳಿದರು. ಸಾ.ರಾ.ಗೋವಿಂದು ಮಾತನಾಡಿ ‘ಸುವ್ವಾಲಿ’ ಎನ್ನುವ ಹೆಸರೇ ತುಂಬಾ ಚೆನ್ನಾಗಿದೆ. ಪಿ.ಯು.ಸಿ. ಓದುತ್ತಿರುವ ಹೆಣ್ಣುಮಗಳು ಈ ಚಿತ್ರವನ್ನು ನಿರ್ದೇಶನ ಮಾಡಿರುವುದು ಮೆಚ್ಚಲೇಬೇಕು. ಈಗ ಸಬ್ಸಿಡಿಗಾಗಿ ಸಿನಿಮಾ ಮಾಡುವವರೇ ಹೆಚ್ಚಾಗಿದ್ದಾರೆ. ಸರ್ಕಾರ ಒಂದು ವರ್ಷ ಸಬ್ಸಿಡಿ ಕೊಡುವುದನ್ನು ನಿಲ್ಲಿಸಬೇಕು. ಆಗ ಒಳ್ಳೆ ಸಿನಿಮಾಗಳು ಮಾತ್ರ ಬರುತ್ತವೆ. ಈ ಟಿ.ವಿ. ರೇಟ್ಸ್ ಕೂಡ ಬಿದ್ದುಹೋಗಿದೆ. ಇಂತಹ ಸಣ್ಣ ಚಿತ್ರಗಳಿಗೆ ಲಹರಿ ವೇಲು ಅವರು ಮೊದಲಿನಿಂದಲೂ ಸಹಕರಿಸುತ್ತಾ ಬಂದಿದ್ದಾರೆ. ಈ ಚಿತ್ರ ಯಶಸ್ವಿಯಾಗಲಿ ಎಂದು ಹೇಳಿದರು. ನಿರ್ಮಾಪಕ ಶ್ರೀರಾಂಬಾಬು ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸಾಧ್ಯವಾದರೆ ಅದನ್ನು ಚಿತ್ರದಲ್ಲಿ ಸೇರಿಸಿಕೊಳ್ಳುತ್ತಾರೆ.
Be the first to comment