ಜಿ9ಕಮ್ಯೂನಿಕೇಷನ್ಸ್ ಮೀಡಿಯಾ ಆ್ಯಂಡ್ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರ ಅಮೃತಾ ಅಪಾರ್ಟ್’ಮೆಂಟ್ಸ್. ಈ ಚಿತ್ರಕ್ಕೆ ರಚನೆ, ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ ಗುರುರಾಜ್ ಕುಲಕರ್ಣಿ (ನಾಡಗೌಡ). ಮಂಗಳವಾರ ಇದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಚಂದನವನದ ಖ್ಯಾತ ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅದೇ ರೀತಿ ನಟಿ, ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್ ಅವರಿಂದಲೂ ತಂಡ ಹಾರೈಕೆಯನ್ನು ಪಡೆದುಕೊಂಡಿತು.
ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನೇ ಅಮೃತಾ ಅಪಾರ್ಟ್ ಮೆಂಟ್ ಸಿನಿಮಾ ಹೊಂದಿದೆ. ಇಡೀ ತಂಡಕ್ಕೆ ಈ ಸಿನಿಮಾ ಅಮೃತವನ್ನು ಉಣಿಸಲಿ ಎಂದರು ಕೆಸಿಎನ್ ಚಂದ್ರಶೇಖರ್. ಗುರುರಾಜ್ ತುಂಬ ಫ್ಯಾಷನೇಟ್ ನಿರ್ದೇಶಕರು. ಅಷ್ಟೇ ಚೆನ್ನಾಗಿ ಈ ಸಿನಿಮಾ ಮಾಡಿದ್ದಾರೆ. ಅವರ ಆಕ್ಸಿಡೆಂಟ್ ಚಿತ್ರದಲ್ಲಿಯೇ ಅವರ ಕೆಲಸವನ್ನು ನೋಡಿದ್ದೆ. ಲಾಸ್ಟ್ ಬಸ್ ಚಿತ್ರದಲ್ಲಿಯೂ ನೋಡಿದ್ದೆ. ಹಾಗಾಗಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ವಿಜಯಲಕ್ಷ್ಮಿ ಸಿಂಗ್.
ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ ಬಾಲಾಜಿ ಮನೋಹರ, ಇದು ಸಣ್ಣ ಬಜೆಟ್ನ ಸಿನಿಮಾ ಆದರೆ, ದೊಡ್ಡ ಐಡಿಯಾದೊಂದಿಗೆ ತಯಾರಾಗಿದೆ. ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು. ಅದೇ ರೀತಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ ತಾರಕ್ ಪೊನ್ನಪ್ಪ. ಇದು ಮಾಸ್ ಮಸಾಲಾ ಸಿನಿಮಾ ಅಲ್ಲ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಇರುವ ಚಿತ್ರ. ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾ ಹುಡುಕುತ್ತಿದ್ದಾಗ ಈ ಸಿನಿಮಾ ಸಿಕ್ಕಿತ್ತು. ಅಷ್ಟೇ ಚೆನ್ನಾಗಿ ಮೂಡಿಬಂದಿದೆ ಎಂದರು.
ಇನ್ನು ಚಿತ್ರದಲ್ಲಿ ಎಸಿಪಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ ಮಾನಸಾ ಜೋಷಿ, ಲಾಸ್ಟ್ ಬಸ್ ಸಿನಿಮಾದ ಬಹುತೇಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದೆ. ಬಾಲಾಜಿ ಮನೋಹರ್ ಅವರ ಜತೆ ನಟಿಸಬೇಕಿತ್ತು ಎಂಬ ಆಸೆಯನ್ನು ಈ ಸಿನಿಮಾದ ಮೂಲಕ ಈಡೇರಿಸಿಕೊಂಡಿದ್ದೇನೆ. ಈ ಚಿತ್ರದಲ್ಲಿ ನಾನು ಎಸಿಪಿ ರತ್ನಪ್ರಭ ಪಾತ್ರ ಮಾಡಿದ್ದೇನೆ ಎಂದರು.
ಅದೇ ರೀತಿ ಈ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತ ಮಾರ್ಸ್ ಸುರೇಶ್ ಸಹ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಇದು ಬೆಂಗಳೂರಿನ ಕಥೆ. ಐಟಿಬಿಟಿ ಅನ್ನೋ ಈ ಜಮಾನಾದ ಕಥೆ. ಬೆಂಗಳೂರಿಗರು ಸದ್ಯ ಏನಾಗುತ್ತಿದ್ದಾರೆ ಎಂಬುದನ್ನು ಈ ಸಿನಿಮಾ ಮೂಲಕ ಸಸ್ಪೆನ್ಸ್ ಶೈಲಿಯಲ್ಲಿ ತೋರಿಸಿದ್ದೇವೆ. ಒಡೆದು ಹೋದ ಮನಸ್ಸುಗಳನ್ನು ಒಂದು ಮಾಡುವ ಕೆಲಸ ಈ ಸಿನಿಮಾದಲ್ಲಿ ಆಗಿದೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕಂತೆ ಎಂದರು ನಿರ್ದೇಶಕ, ನಿರ್ಮಾಪಕ ಗುರುರಾಜ್ ಕುಲಕರ್ಣಿ (ನಾಡಿಗೇರ್)
ಅರ್ಜುನ್ ಅಜಿತ್ ಛಾಯಾಗ್ರಹಣ, ಕೆಂಪರಾಜ್ ಅರಸ್ ಸಂಕಲನ, ಎಸ್.ಡಿ ಅರವಿಂದ್ 3ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಎ.ಎಮ್.ಶಾ ಹಿನ್ನೆಲೆ ಸಂಗೀತ ನೀಡಿದ್ದಾರೆ. ಕೆ. ಕಲ್ಯಾಣ್ ಡಾ. ಬಿ.ಆರ್ ಪೊಲೀಸ್ ಪಾಟೀಲ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ತೇಜಸ್ ಹರಿದಾಸ್, ವಾಣಿ ಹರಿಕೃಷ್ಣ, ಅರವಿಂದ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.
ಚಿತ್ರದಲ್ಲಿ ತಾರಕ್ ಪೊನ್ನಪ್ಪ ನಾಯಕ, ಊರ್ವಶಿ ಗೋವರ್ಧನ್ ನಾಯಕಿಯಾಗಿದ್ದಾರೆ. ಬಾಲಾಜಿ ಮನೋಹರ್ ವಿಶೇಷ ಪಾತ್ರದಲ್ಲಿದ್ದಾರೆ. ಸೀತಾ ಕೋಟೆ ವಕೀಲೆಯಾಗಿ, ಮಾನಸಾ ಜೋಶಿ ಎಸಿಪಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಮಾಲತೇಶ್, ಸಿತಾರ, ಜಗದೀಶ್ ಜಾಲಾ, ಅರುಣ್ ಮೂರ್ತಿ, ರಾಜು ನೀನಾಸಂ, ಶಂಕರ್ ಶೆಟ್ಟಿ ರಂಗಸ್ವಾಮಿ ಪಾತ್ರವರ್ಗದಲ್ಲಿದ್ದಾರೆ. ಸುನೀಲ್ ಆರ್.ಡಿ. ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರಾಗಿದ್ದಾರೆ. ಹರೀಶ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
Be the first to comment