ಮಾರ್ಚ್ 27ಕ್ಕೆ ಅಂಬರೀಶ್ ಸ್ಮಾರಕ ಉದ್ಘಾಟನೆ ಆಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಮಾರ್ಚ್ 27ಕ್ಕೆ ನನ್ನ ಆತ್ಮೀಯ ಗೆಳೆಯ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಲಿದ್ದೇವೆ. ಅದೇ ದಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರನ್ನು ನಾಮಕರಣ ಮಾಡಲಾಗುವುದು ಎಂದರು.
ಅಂಬರೀಶ್ ನನ್ನ ಆತ್ಮೀಯ ಗೆಳೆಯ. ನಾವಿಬ್ಬರೂ ಒಟ್ಟಿಗೆ ಬಹಳ ಒಳ್ಳೆಯ ಸಮಯ ಕಳೆದಿದ್ದೇವೆ. ಅವನಿಗೆ ಕುದುರೆಗಳೆಂದರೆ ಬಹಳ ಇಷ್ಟ. ನಮ್ಮ ಹೆಸರು ಮರೆಯುತ್ತಿದ್ದನೇನೋ. ಆದರೆ ಕುದುರೆಗಳ ಹೆಸರು ಮರೆಯುತ್ತಿರಲಿಲ್ಲ. ಅವನು ವಿಂಡ್ಸ್ರ್ಮ್ಯಾನರ್ನಲ್ಲಿ ಒಂದು ರೂಂ ತೆಗೆದುಕೊಂಡಿದ್ದ. ಆ ರೂಮ್ ನ್ನು ಕೂಡ ಸ್ಮಾರಕ ಮಾಡಬಹುದು ಎಂದರು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಿದೆವು. ಅವರ ಸ್ಮಾರಕ ನಿರ್ಮಾಣವನ್ನೂ ಮಾಡುತ್ತೇವೆ. ಡಾ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಸ್ಮಾರಕವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತೇವೆ. ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಇದೇ ವರ್ಷ ಚಾಲನೆ ನೀಡಲಿದ್ದೇವೆ ಎಂದು ಸಿಎಂ ಹೇಳಿದರು.
ಚಿತ್ರರಂಗದಿಂದ ಫಿಲಂ ಸಿಟಿ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಇದನ್ನು ಖಂಡಿತ ಮಾಡುತ್ತೇವೆ. ಹಾಲಿವುಡ್ ಟೆಕ್ನಾಲಜಿಯುಳ್ಳ ಸ್ಟುಡಿಯೋ ಇರುವ ಫಿಲಂ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
__
Be the first to comment