ಇತ್ತೀಚೆಗೆ ಬಿಡುಗಡೆಯಾಗಿ ಕರೋನಾ ಕಾರಣಕ್ಕಾಗಿ ಹಲವಾರು ತೊಂದರೆಗಳನ್ನು ಎದುರಿಸಿಯೂ ಎಲ್ಲರ ಮೆಚ್ಚುಗೆ ಗಳಿಸಿದ್ದ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಚಿತ್ರ ಈಗ ಅಮೇಜಾನ್ ಪ್ರೈಮ್ ವಿಡಿಯೋ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಹೌದು ಕೇಳೋಕೆ ಇದು ನಂಬಲು ಕಷ್ಟವಾದ ಶಾಕಿಂಗ್ ಸುದ್ದಿ. ಆದರೂ ನಿಜ. ಇದನ್ನು ಸ್ವತಃ ಯುವರತ್ನ ಚಿತ್ರದ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಖಚಿತ ಪಡಿಸಿದೆ. ನಾಳೆ ಅಂದರೆ ಏಪ್ರಿಲ್ 9ರಂದು ಯುವರತ್ನ ಚಿತ್ರವನ್ನು ವೀಕ್ಷಕರು ಪ್ರೈಮ್ ವಿಡಿಯೋ ಚಂದಾದಾರಿಕೆ ಮೂಲಕ ಆನ್ ಲೈನ್ ನಲ್ಲೇ ವೀಕ್ಷಿಸಬಹುದಾಗಿದೆ. ಹಾಗಾಗಿ ನಾಳೆ ಯುವರತ್ನ ನಿಮ್ಮ ಮೊಬೈಲ್ ಫೋನ್, ನಿಮ್ಮ ಮನೆಯ ಟಿವಿ, ಕಂಪ್ಯೂಟರ್ ಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ.
ಹೊಂಬಾಳೆ ಫಿಲ್ಮ್ಸ್ ಈ ಸುದ್ದಿಯನ್ನು ಈಗ ಅಫಿಷಿಯಲ್ ಆಗಿ ಖಚಿತಪಡಿಸಿದೆ. ಇದಕ್ಕಾಗಿ ವರ್ಚುವಲ್ ಪ್ರೆಸ್ ಮೀಟ್ ಅನ್ನೂ ಹಮ್ಮಿಕೊಂಡಿತ್ತು ಚಿತ್ರತಂಡ. ಚಿತ್ರ ಬಿಡುಗಡೆಯಾದ ಎಂಟೇ ದಿನಕ್ಕೆ ಆನ್ ಲೈನ್ ನಲ್ಲಿ ಮೂಡಿಬರುತ್ತಿರುವ ವಿಷಯ ಕೆಲವರಿಗೆ ಖುಷಿ ಕೊಟ್ಟರೆ, ಇನ್ನು ಕೆಲವು ಅಪ್ಪಟ ಸಿನಿಮಾ ಪ್ರೇಮಿಗಳು ಹೀಗಾದರೆ ಸಿನಿಮಾರಂಗದ ಕಥೆ ಏನು, ಚಿತ್ರಮಂದಿರಗಳ ಗತಿ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಆದರೆ ಇದರ ಬಗ್ಗೆ ಚಿತ್ರದ ನಿರ್ಮಾಪಕರೇ ಆಸಕ್ತಿ ತೋರಿಸಿರುವುದರಿಂದ ಯಾರೂ ಹೆಚ್ಚು ಮಾತನಾಡಲು ಆಗುವುದಿಲ್ಲ. ಚಿತ್ರ ಬಿಡುಗಡೆ ಆಗಿ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಸರ್ಕಾರ ಅದಕ್ಕೆ ಅಡ್ಡಗಾಲು ಹಾಕಿತ್ತು. ಚಿತ್ರಮಂದಿರಗಳಲ್ಲಿ ಹಾಜರಾತಿಯನ್ನು ಶೇಕಡಾ 50ಕ್ಕೆ ಇಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಪುನೀತ್ ಸೇರಿದಂತೆ ಚಿತ್ರತಂಡದ ಹಲವರು ಒತ್ತಡ ಹಾಕಿದ್ದರಿಂದ 4 ದಿನಗಳವರೆಗೆ ಮಾತ್ರ 100 ಶೇಕಡಾ ಹಾಜರಾತಿಗೆ ಸರ್ಕಾರ ಅನುಮತಿ ಕೊಟ್ಟಿತ್ತು. ಈಗ ಆ ಸಮಯವೂ ಮುಗಿದಿರುವುದರಿಂದ ಚಿತ್ರದ ನಿರ್ಮಾಪಕರು, ಕರೋನಾ ಭೀತಿಯಿಂದ ಜನ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಕಾರಣ ಮತ್ತು ಚಿತ್ರಮಂದಿರಗಳ ಹಾಜರಾತಿಗೆ ಮಿತಿ ಹಾಕಿದ ಕಾರಣ ಇಟ್ಟುಕೊಂಡು ಈಗ ನೇರವಾಗಿ ಮನೆ ಮನೆಗೆ ಯುವರತ್ನನನ್ನು ತಲುಪಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ದೊಡ್ಡ ಸ್ಟಾರ್ ಒಬ್ಬರ ಸಿನಿಮಾವೊಂದು ಬಿಡುಗಡೆಯಾದ ಎಂಟೇ ದಿನಕ್ಕೆ ಓಟಿಟಿಯಲ್ಲಿ ಬರುತ್ತದೆ ಅಂದ್ರೆ ಅದರಿಂದ ನಿರ್ಮಾಪಕರಿಗೆ ದೊಡ್ಡ ಮೊತ್ತದ ಹಣ ಸಂದಾಯ ಆಗಿರುತ್ತದೆ ಎಂಬುದು ನಿಜವಾದರೂ, ಪುನೀತ್ ಅವರಂಥ ಮಾಸ್ ಕ್ರೌಡ್ ಪುಲ್ಲರ್ ಸಿನಿಮಾಗೆ ಇದು ನಷ್ಟವೇ ಎಂದು ಭಾವಿಸಲಾಗುತ್ತಿದೆ. ಆದರೂ ಸಿಕ್ಕಿದ್ದು ಸೀರುಂಡೆ ಎನ್ನುವಂಥ ನಿರ್ಮಾಪಕರ ಈ ಮನಸ್ಥಿತಿಯ ಬಗ್ಗೆ ಈಗ ಚರ್ಚೆ ಆಗುತ್ತಿರುವುದಂತೂ ನಿಜ. ಒಟ್ಟಿನಲ್ಲಿ ಯುವರತ್ನ ಏಪ್ರಿಲ್ 9ರಿಂದ ಓಟಿಟಿಯಲ್ಲಿ ವೀಕ್ಷಣೆಗೆ ಸಿಗಲಿದೆ. ಆದರೆ ಚಿತ್ರಮಂದಿರಗಳಲ್ಲೂ ಚಿತ್ರದ ಪ್ರದರ್ಶನ ಮುಂದುವರಿಯಲಿದೆ ಎಂದು ನಿರ್ಮಾಣ ಸಂಸ್ಥೆ ಹೇಳಿದೆ. ಇನ್ನು ಎಲ್ಲಿ ಸಿನಿಮಾ ನೋಡಬೇಕು ಎಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು.
Be the first to comment