ಅಲ್ಫಾ

Movie Review: ಇಲ್ಲಿ ಅರ್ಜುನನ ಗುರಿ ತಪ್ಪುವುದೇ ಇಲ್ಲ..!

ಚಿತ್ರ: ಅಲ್ಫಾ
ನಿರ್ದೇಶನ: ವಿಜಯ್ ನಾಗೇಂದ್ರ
ನಿರ್ಮಾಣ: ಎಲ್. ಎ ಪ್ರೊಡಕ್ಷನ್ಸ್
ತಾರಾಗಣ: ಹೇಮಂತ್ ಕುಮಾರ್, ಗೋಪಿಕಾ‌ ಸುರೇಶ್, ಅಯನಾ ಮೊದಲಾದವರು…
ರೇಟಿಂಗ್: 3.5/5

ಇಲ್ಲೊಬ್ಬ ಅರ್ಜುನನಿದ್ದಾನೆ. ಈತ ಕೂಡ ಗುರಿ ಇಟ್ಟರೆ ತಪ್ಪುವ ಮಾತೇ ಇಲ್ಲ. ಆದರೆ ಗುರುವಾಗಿ ದ್ರೋಣಾಚಾರ್ಯನಿಲ್ಲ. ತಂದೆಯೇ ಎಲ್ಲ. ಅಂಥ ತಂದೆಯನ್ನು ಕೂಡ ಮೀರಿಸುವ ಸಾಧನೆ ಮಾಡುವ ಮೂಲಕ ಇಡೀ ಸಮಾಜದ ಗಮನ ಸೆಳೆಯುತ್ತಾನೆ. ಅ ಅಂದರೆ ಅರ್ಜುನ. ಅದೇ ಆಲ್ಫಾ ಚಿತ್ರದಿಂದ ಶುರುವಾಗಿರುವ ನಾಯಕತ್ವದ ಆರಂಭ.

ಅರ್ಜುನ್ ತಂದೆ ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ. ಅವರ ಹೆಸರು ಶಕ್ತಿ ಪ್ರಸಾದ್‌. ಅವರಿಗೆ ತಮ್ಮ ಏಕೈಕ ಪುತ್ರ ಅರ್ಜುನ್
ಐಪಿಎಸ್ ಆಗಬೇಕೆನ್ನುವ ಕನಸಿರುತ್ತದೆ‌. ಆದರೆ ಅರ್ಜುನ ತಂದೆಯ ಕನಸನ್ನು ನನಸು ಮಾಡುತ್ತಾನ? ಎನ್ನುವುದೇ ಚಿತ್ರದ ಪ್ರಮುಖ ಎಳೆ.

ಪೊಲೀಸ್ ಪುತ್ರ ಅರ್ಜುನ್ ಎನ್ನುವ ಪಾತ್ರವನ್ನು ಹೇಮಂತ್ ಕುಮಾರ್ ನಿಭಾಯಿಸಿರುವ ರೀತಿ ಆಕರ್ಷಕವಾಗಿದೆ. ಪೊಲೀಸ್ ಆಗಲು ಮುನ್ನುಗ್ಗುವ ಯುವಕನ ಮೈಕಟ್ಟು, ದೇಹದಾರ್ಢ್ಯತೆ ಹೀಗೆ ಎಲ್ಲ ವಿಚಾರದಲ್ಲೂ ಸೆಳೆಯುವಂತೆ ಕಾಣಿಸುತ್ತಾರೆ ಹೇಮಂತ್ ಕುಮಾರ್. ಹೇಮಂತ್ ತಂದೆ ಪೊಲೀಸ್ ಅಧಿಕಾರಿ ಶಕ್ತಿ ಪ್ರಸಾದ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಕಾಣಿಸಿದ್ದಾರೆ.‌ ತಾಯಿಯಾಗಿ ಮಾನಸಿ ಸುಧೀರ್ ಆಕರ್ಷಕವಾಗಿ ಅಭಿನಯಿಸಿದ್ದಾರೆ. ಇವರಿಬ್ಬರ ಭರವಸೆಯ ಪುತ್ರ ಸಂದರ್ಭಕ್ಕೆ ತಕ್ಕ ಹಾಗೆ ಬದಲಾಗುವ ರೀತಿಯೇ ರೋಚಕ.

ಈ‌ ಚಿತ್ರದಲ್ಲಿ ನಾಯಕನಿಗೆ ಇಬ್ಬರು ಜೋಡಿಗಳಿದ್ದಾರೆ. ಒಬ್ಬಾಕೆ ಜಿಮ್ ಮೇಟ್ ಗೆಳತಿ ಆಕಾಂಕ್ಷಾ. ಮತ್ತೊಬ್ಬಾಕೆ ಹೆಡ್ ಕಾನ್ಸ್ಸ್ಟೇಬಲ್ ಅನುರಾಧಾ. ಆಕಾಂಕ್ಷಾ ಪಾತ್ರವನ್ನು ಗೋಪಿಕಾ ಸುರೇಶ್ ಮಾಡಿದ್ದಾರೆ. ಅನುರಾಧಾ ಪಾತ್ರವನ್ನು ಅಯನಾ ಅರಗಿಸಿಕೊಂಡಿದ್ದಾರೆ. ಐಜಿ‌ ಅಶ್ವಥ್ ಕುಮಾರ್ ಪಾತ್ರದಲ್ಲಿ ಅವಿನಾಶ್, ಪೊಲೀಸ್ ಅಧಿಕಾರಿಗಳಾಗಿ ಬಿ.ಎಮ್. ಗಿರಿರಾಜ್ ಮತ್ತು ರಾಘು ಶಿವಮೊಗ್ಗ , ಖಳ ಪಾತ್ರಗಳಲ್ಲಿ ಕಾರ್ತಿಕ್ ಮಹೇಶ್, ರಮೇಶ್ ಇಂದಿರಾ ಮತ್ತು ಬಾಲು ನಾಗೇಂದ್ರ ಸೇರಿದಂತೆ ಭರ್ಜರಿ ತಾರಾಗಣವೇ ಇಲ್ಲಿದೆ.

ಸರಳ ಪ್ರೇಮ, ಪೊಲೀಸ್ ಕುಟುಂಬದ ಆದರ್ಶದೊಂದಿಗೆ ಶುರುವಾಗುವ ಕಥೆ ಡ್ರಗ್ಸ್ ಜಾಲದ ಭಯಾನಕತೆಯನ್ನು ತೆರೆದಿಡುವ ರೀತಿ ರೋಮಾಂಚಕಾರಿಯಾಗಿ ಮೂಡಿ ಬಂದಿದೆ. ಮಾಸ್ತಿ ಸಂಭಾಷಣೆ ಇಲ್ಲಿ ಆಸ್ತಿಯಾಗಿದೆ. ಕಾರ್ತಿಕ್ ಎಸ್ ಛಾಯಾಗ್ರಹಣದಲ್ಲಿ ಅನೂಪ್ ಸೀಳಿನ್ ಸಂಗೀತದ ಹಾಡುಗಳು ಆಸ್ವಾದಿಸುವಂತೆ ಮೂಡಿ ಬಂದಿವೆ. ಎಲ್ಲಕ್ಕೂ ಕಳಶವಿಟ್ಟಂತೆ ವೇಗವಾಗಿ ಸಾಗುವ ವಿಜಯ್ ನಾಗೇಂದ್ರ ನಿರ್ದೇಶನ ದೃಶ್ಯಗಳು ಪ್ರೇಕ್ಷಕರ ಪಾಲಿಗೆ ಸಮಯ ಕಳೆದು ಹೋಗಿದ್ದೇ ಗೊತ್ತಾಗದ ರೀತಿಯಲ್ಲಿ ಮನರಂಜನೆ ನೀಡುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!