ಲವ್ ಯು ರಚ್ಚು ಎಂದ ಅಜಯ್ ರಾವ್…ಹೊಸ ಪ್ರಪೊಸಲ್ ಗೆ ನಾಚಿ ನೀರಾದ ಡಿಂಪಲ್ ಬೆಡಗಿ

ಕೃಷ್ಣ ಅಜಯ್‌ರಾವ್ ಮತ್ತು ಡಿಂಪಲ್ ಬೆಡಗಿ ರಚಿತಾರಾಮ್ ಇದೇ ಮೊದಲಬಾರಿಗೆ ಜೊತೆಯಾಗಿ ನಟಿಸುತ್ತಿರುವ “ಲವ್ ಯೂ ರಚ್ಚು”  ಚಿತ್ರದ ಮುಹೂರ್ತ ಕಾರ್ಯಕ್ರಮ ರವಿಶಂಕರ್ ಗುರೂಜಿ ಅವರ  ಆರ್ಟ್ ಆಫ್ ಲಿವಿಂಗ್‌ನ ಆವರಣದಲ್ಲಿ ನೆರವೇರಿತು. ಯುವಪ್ರತಿಭೆ  ಶಂಕರ್ ಎಸ್.ರಾಜ್ ಅವರ ಪ್ರಥಮ ನಿರ್ದೇಶನದಲ್ಲಿ  ಮೂಡಿಬರುತ್ತಿರುವ ಚಿತ್ರ ಇದಾಗಿದ್ದು, ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ನಡೆದ ಚಿತ್ರದ ಮುಹೂರ್ತ   ದೃಷ್ಯಕ್ಕೆ ದಯಾನಂದ್ ಅವರು ಕ್ಲಾಪ್ ಮಾಡಿದರು, ಮಂಜುನಾಥ್ ಕ್ಯಾಮೆರಾ ಚಾಲನೆ ಮಾಡಿದರು.

ಮೊದಲ ದೃಷ್ಯವನ್ನು ಗುರೂಜಿ ಅವರ ಮೇಲೆ ಚಿತ್ರೀಕರಿಸಲಾಯಿತು, ಜಿ.ಸಿನಿಮಾಸ್ ಅಡಿಯಲ್ಲಿ ನಿರ್ದೇಶಕ ಗುರು ದೇಶಪಾಂಡೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡುವುದರ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಮೂರು ಹಾಡುಗಳಿಗೆ ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನವಿದೆ. ನಿರ್ದೇಶಕ ಶಶಾಂಕ್ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ.

ಮುಹೂರ್ತದ ನಂತರ ಶಶಾಂಕ್ ಮಾತನಾಡುತ್ತ ಒಬ್ಬ ಕಥೆಗಾರ ಯಾವ ಪಾತ್ರವನ್ನೂ ಗಮನದಲ್ಲಿಟ್ಟುಕೊಂಡು ಕಥೆ ಬರೆಯೋಲ್ಲ, ಆದರೆ ನಾನು ಈ ಕಥೆಯನ್ನು ಮಾತ್ರ ಅಜಯ್‌ ಗೋಸ್ಕರವೇ ಮಾಡಿದ್ದು, ಅವರನ್ನು ನಾನು ತುಂಬಾ ಹತ್ತಿರದಿಂದ ಕಂಡವನು, ಹಾಗಾಗಿ ಅವರ ಮ್ಯಾನರಿಸಂ ಇಟ್ಟುಕೊಂಡು ಹೆಣೆದಂಥ ಕಥೆಯಿದು. ಈ ಚಿತ್ರವನ್ನು ನಾನೇ ಮಾಡಬೇಕಿತ್ತು.

ಗುರು ದೇಶಪಾಂಡೆ ಅವರು ಕೇಳಿದ್ದರಿಂದ ಅವರಿಗೆ ಕೊಟ್ಟಿದ್ದೇನೆ. ಈ ಚಿತ್ರದಲ್ಲಿ ಫ್ರೇಂ ಟು ಫ್ರೇಂ ನಿಮಗೆ ಅಜಯ್‌ರಾವ್ ಅವರೇ ಕಾಣಿಸುತ್ತಾರೆ, ಪಾತ್ರಗಳಲ್ಲಿ ತುಂಬಾ ಕ್ಯೂರಿಯಾಸಿಟಿ ಇದೆ, ಇಲ್ಲಿ ಎಲ್ಲಾ ಪಾತ್ರಗಳೂ ಪ್ರಮುಖವಾಗಿವೆ, ನಾನು ಎಷ್ಟೇ ಕಥೆಗಳನ್ನು ಮಾಡಿರಬಹುದು, ಅದರಲ್ಲಿ ನನಗೆ ತುಂಬಾ ಇಷ್ಟವಾದ ಕಥೆಯಿದು ಎಂದು
ಹೇಳಿದರು.

ನಂತರ ನಾಯಕ ನಟ ಅಜೇಯ್‌ರಾವ್ ಮಾತನಾಡಿ ಈ ಶೀರ್ಷಿಕೆಯನ್ನು  ಕೇಳಿದಾಗಲೇ ಇದೊಂದು ಲವ್ ಸ್ಟೋರಿ ಅನ್ನೋದು ಗೊತ್ತಾಗುತ್ತದೆ. ನನಗೆ ತುಂಬಾ ಹತ್ತಿರದ ನಿರ್ದೇಶಕರು   ಮಾಡಿದ ಕಥೆಯಿದು, ಎಲ್ಲರೂ ಮದುವೆಗೆ ಮುಂಚಿನ ಲವ್‌ ಸ್ಟೋರಿಯನ್ನು ಹೇಳುತ್ತಾರೆ. ಆದರೆ ಇಲ್ಲಿ ಮದುವೆಯಾದ  ನಂತರವೂ ಯಾಕೆ ಪ್ರೀತಿಸ ಬಾರದು ಎಂದು
ತೋರಿಸುತ್ತಿರುವುದಲ್ಲದೆ, ಮದುವೆಯಾದ ಹೊಸದರಲ್ಲಿ ನಾವು ಜೀವನದಲ್ಲಿ ಕೆಲವೊಂದು ಘಟನೆಗಳನ್ನು ಎದುರಿಸಬೇಕಾಗುತ್ತದೆ,   ಅದು ಯಾವ ರೀತಿ ಇರುತ್ತೆ ಎಂಬುದನ್ನು ಹ್ಯೂಮರಸ್ ಆಗಿ ಚಿತ್ರದಲ್ಲಿ ಹೇಳಲಾಗಿದೆ, ಅಲ್ಲದೆ ರಚಿತಾರಾಮ್ ಅವರ ಜೊತೆ ಮೊದಲಬಾರಿಗೆ ನಟಿಸುತ್ತಿದ್ದೇನೆ.

ರೊಮ್ಯಾಂಟಿಕ್ ಕಥೆಯ ಜೊತೆಗೆ ಒಂದು ಥ್ರಿಲ್ಲಿಂಗ್ ಎಳೆ ಕೂಡ ಈ ಸಿನಿಮಾದಲ್ಲಿದೆ. ಅದೇ ಚಿತ್ರದ ಕ್ಯೂರಿಯಾಸಿಟಿ ಎಂದರು. ನಿರ್ದೇಶಕ ಶಂಕರ್ ಎಸ್.ರಾಜ್ ಮಾತನಾಡುತ್ತಾ ನನ್ನ ಗುರುಗಳಾದ ಗುರು ದೇಶಪಾಂಡೆ ಅವರ ಜೊತೆ ಸಾಕಷ್ಟು ಚಿತ್ರಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದೇನೆ, ಅವರು ಇಂಥಾ ಒಂದು ಅದ್ಭುತ ಚಿತ್ರ ಮಾಡಲು ಅವಕಾಶ ಕೊಟ್ಟಿರುವುದು ನನ್ನ ಪುಣ್ಯ ಎನ್ನಬಹುದು.

ಮೊದಲ ಚಿತ್ರದಲ್ಲೇ ನನಗೆ ಒಳ್ಳೇ ಕಥೆಯ ಜೊತೆ ಒಳ್ಳೇ ಹೀರೋ ಕೂಡ ಸಿಕ್ಕಿದ್ದಾರೆ, ಈ ಥರದ ಅವಕಾಶ ಎಲ್ಲರಿಗೂ ಸಿಗಲ್ಲ, ನನಗೆ ಸಿಕ್ಕ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎಂದು   ಹೇಳಿದರು. ನಾಯಕಿ ರಚಿತಾರಾಮ್ ಮಾತನಾಡುತ್ತ ಈ ಚಿತ್ರದ ಶೀರ್ಷಿಕೆ ಕೇಳಿದಾಗಲೇ ನನಗೆ ಖುಷಿಯಾಯ್ತು. ಜೊತೆಗೆ ನನ್ನ ಸಹಿಯೇ ಚಿತ್ರದ ಶೀರ್ಷಿಕೆ ವಿನ್ಯಾಸ ಆಗಿದೆ.ಅಲ್ಲದೆ ಮುಹೂರ್ತವನ್ನು ಆರ್ಟ್ ಆಫ್ ಲಿವಿಂಗ್‌ನಲ್ಲಿ ಮಾಡಿದ್ದು, ಗುರೂಜಿಗಳ ಆಶೀರ್ವಾದ ಸಿಕ್ಕಿದ್ದು ತುಂಬಾ ಸಂತಸ ಕೊಟ್ಟಿದೆ. ಇದೇ ಮೊದಲಬಾರಿಗೆ ನಾನು ರವಿಶಂಕರ ಗುರೂಜಿ ಅವರನ್ನು ಭೇಟಿ ಮಾಡಿದೆ ಎಂದರಲ್ಲದೆ, ಚಿತ್ರದ ಕುರಿತಂತೆ ಮಾತನಾಡುತ್ತ ನನ್ನ ಪಾತ್ರವನ್ನು ಹೆಚ್ಚಿಗೆ ಬಿಚ್ಚಡಲು ಸಾಧ್ಯವಿಲ್ಲ, ಆ ಥರದ ಪಾತ್ರವಿದು. ಕಥೆ ಕೇಳಿದ ತಕ್ಷಣ ಈ ಪಾತ್ರ ಮಾಡಲು ಒಪ್ಪಿಕೊಂಡೆ.

ನಾಲ್ಕೆದು ವರ್ಷಗಳಿಂದ ನಾನು ಅಜಯ್‌ರಾವ್ ಕಾಂಬಿನೇಷನ್‌ನಲ್ಲಿ  ಅಭಿನಯಿಸಬೇಕು ಅಂದುಕೊಂಡಿದ್ದೆ, ಈಗ ಅದು ಸಾಧ್ಯವಾಯಿತು, ನಮ್ಮಿಬ್ಬರಿಗೂ ಈ ಪಾತ್ರ ಹೇಳಿ ಮಾಡಿಸಿದಂತಿದೆ. ಮನರಂಜನೆಗೇನೂ ಮೋಸವಿಲ್ಲ ಎಂದು ಹೇಳಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!