“ಹಿಂದಿ ರಾಷ್ಟ್ರಭಾಷೆ ಅಲ್ಲ’ ಎಂದು ಹೇಳಿಕೆ ನೀಡಿದ ಕಿಚ್ಚ ಸುದೀಪ್ ಮಾತಿಗೆ ಬಾಲಿವುಡ್ ನಟ ಅಜಯ್ ದೇವಗನ್ ತಿರುಗೇಟು ನೀಡಿರುವ ಟ್ವೀಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಉಪೇಂದ್ರ ನಟಿಸುತ್ತಿರುವ ‘I am R’ ಸಿನಿಮಾದ ಕಾರ್ಯಕ್ರಮದಲ್ಲಿ ಸುದೀಪ್ ಹೇಳಿದ ಮಾತು ಅಜಯ್ ದೇವಗನ್ ಅವರನ್ನು ಕೆರಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಜಯ್ ದೇವಗನ್, “ಹಿಂದಿ ರಾಷ್ಟ್ರಭಾಷೆ ಅಲ್ಲದೇ ಇದ್ದರೆ ನೀವೇಕೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ರಾಷ್ಟ್ರಭಾಷೆ ಆಗಿತ್ತು. ಮುಂದೆಯೂ ಆಗಿರುತ್ತದೆ. ಜನ ಗಣ ಮನ” ಎಂದಿದ್ದರು.
ಈ ಬಗ್ಗೆ ಖಡಕ್ ಉತ್ತರ ನೀಡಿದ್ದ ಸುದೀಪ್, “ಸರ್ ಅಜಯ್ ದೇವಗನ್, ನೀವು ಹಿಂದಿಯಲ್ಲಿ ಮಾಡಿದ ಟ್ವೀಟ್ ನನಗೆ ಅರ್ಥವಾಯಿತು. ಏಕೆಂದರೆ ನಾವೆಲ್ಲ ಹಿಂದಿ ಭಾಷೆಯನ್ನು ಗೌರವಿಸಿದ್ದೇವೆ, ಪ್ರೀತಿಸಿದ್ದೇವೆ. ಆದರೆ ತಪ್ಪು ತಿಳಿಯಬೇಡಿ, ನಾನು ಈ ಟ್ವೀಟ್‌ಗಳನ್ನು ನನ್ನ ಮಾತೃಭಾಷೆ ಕನ್ನಡದಲ್ಲಿ ಮಾಡಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು? ನಾವೂ ಸಹ ಭಾರತಕ್ಕೆ ಸೇರಿದವರೇ ಅಲ್ಲವೆ?” ಎಂದು ಟ್ವೀಟ್ ಮಾಡಿದ್ದರು.
ಇನ್ನೊಂದು ಟ್ವೀಟ್ ನಲ್ಲಿ ”ನಾನು ಭಾರತದ ಎಲ್ಲ ಭಾಷೆಗಳನ್ನು ಪ್ರೀತಿಸುತ್ತೇನೆ ಸರ್, ನಾನು ಆ ಮಾತನ್ನು ಭಿನ್ನವಾದ ಅರ್ಥದಲ್ಲಿ, ಸನ್ನಿವೇಶದಲ್ಲಿ ಹೇಳಿದ್ದೇನೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಮುಗಿಸಿಬಿಡೋಣ. ನಿಮ್ಮ ಬಗ್ಗೆ ಪ್ರೀತಿ, ಗೌರವ ಇದೆ” ಎಂದು ಸುದೀಪ್ ಹೇಳಿದ್ದಾರೆ.
ಈ ಬಗ್ಗೆ ಅಜಯ್ ದೇವಗನ್ ಪ್ರತಿಕ್ರಿಯೆ ನೀಡಿದ್ದು, ”ಸುದೀಪ್, ನೀವು ನನ್ನ ಗೆಳೆಯ, ತಪ್ಪು ಗ್ರಹಿಕೆಗಳನ್ನು ದೂರ ಮಾಡಿದ್ದಕ್ಕೆ ಧನ್ಯವಾದಗಳು. ಚಿತ್ರೋದ್ಯಮದ ಎಲ್ಲರೂ ಒಂದು ಎಂದು ನನ್ನ ಭಾವನೆ. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ನಮ್ಮ ಭಾಷೆಯನ್ನೂ ಎಲ್ಲರೂ ಗೌರವಿಸಲಿ ಎಂದು ಎದುರು ನೋಡುತ್ತೇವೆ. ತರ್ಜುಮೆ ಮಾಡುವಾಗ ಎಲ್ಲೋ ತಪ್ಪಾಗಿದೆ” ಎಂದು ಹೇಳಿದ್ದಾರೆ.
”ತರ್ಜುಮೆಗಳು, ವ್ಯಾಖ್ಯಾನುಗಳು ನಮ್ಮ ದೃಷ್ಟಿಕೋನದಂತೆ ಇರುತ್ತವೆ. ಪೂರ್ಣ ವಿಷಯ ತಿಳಿಯದೇ ಯಾವುದೇ ವಿಷಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಸೂಕ್ತವಲ್ಲ. ನಿಮ್ಮ ಮೇಲೆ ನಾನು ದೋಷಾರೋಪಣೆ ಮಾಡುವುದಿಲ್ಲ. ಆದರೆ ನಿಮ್ಮಿಂದ ಒಂದು ಒಳ್ಳೆಯ ಕಾರಣಕ್ಕೆ ಟ್ವೀಟ್ ಬಂದಿದ್ದರೆ ನನಗೆ ಇನ್ನೂ ಖುಷಿಯಾಗಿರುತ್ತಿತ್ತು. ನಿಮಗೆ ನನ್ನ ಪ್ರೀತಿ” ಎಂದು ಸುದೀಪ್ ಟ್ವೀಟ್ ವಾರ್ ಮುಕ್ತಾಯ ಮಾಡಿದ್ದಾರೆ.
ಟ್ವೀಟ್ ವಾರ್ ಮುಕ್ತಾಯ ಆದರೂ ಅಜಯ್ ದೇವಗನ್ ಅವರ ರಾಷ್ಟ್ರಭಾಷೆ ಹಿಂದಿ ಎನ್ನುವ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ವಿರೋಧಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಅನೇಕ ಕಲಾವಿದರು ವಿರೋಧಿಸಿದ್ದಾರೆ.
___
Be the first to comment