ರೂಪೇಶ್ ಶೆಟ್ಟಿ ನಾಯಕನಾಗಿ ಹಾಗೂ ಜಾಹ್ನವಿ ನಾಯಕಿಯಾಗಿ ಅಭಿನಯಿಸಿರುವ ಅಧಿಪತ್ರ ಸಿನಿಮಾ ಫೆಬ್ರವರಿ 7ಕ್ಕೆ ಬಿಡುಗಡೆಯಾಗುತ್ತಿದೆ. ರಂಗಿತರಂಗ ಸಿನಿಮಾ ನೆನಪಿಸುವ ಟ್ರೇಲರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿರುವ ಚಿತ್ರತಂಡ ನಿನ್ನೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಪ್ರೀ ರಿಲೀಸ್ ಇವೆಂಟ್ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಲಹರಿ ವೇಲು, ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ನಿರ್ಮಾಪಕ ಆರ್ ಜೆ ಪ್ರದೀಪ್, ಹೀಗೂ ಉಂಟೆ ಖ್ಯಾತಿಯ ಆರ್.ನಾರಾಯಣಸ್ವಾಮಿ ಭಾಗವಹಿಸಿದ್ದರು.
ಈ ವೇಳೆ ನಟ ರೂಪೇಶ್ ಶೆಟ್ಟಿ ಮಾತನಾಡಿ, ಸಿನಿಮಾಗಾಗಿ ನಾವೆಲ್ಲಾ ಪ್ರಯತ್ನ ಹಾಕಿದ್ದೇವೆ. ಜನರ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಈ ಸಿನಿಮಾದ ಭಾಗವಾಗಿರುವುದು ಖುಷಿ ಇದೆ. ಚಯನ್ ಶೆಟ್ಟಿ ಹೇಳಿದ ಕಥೆ ಕೇಳಿ ನಾನು ಅಧಿಪತ್ರ ಸಿನಿಮಾ ಒಪ್ಪಿಕೊಂಡೆ. ತುಂಬಾ ನೀಟಾಗಿ ಚಿತ್ರ ಮಾಡಿದ್ದಾರೆ. ನಾನು ಒಬ್ಬ ಪ್ರೇಕ್ಷಕನಾಗಿ ಸಿನಿಮಾಗಾಗಿ ಕಾಯುತ್ತಿದ್ದೇನೆ. ಇದೊಂದು ಕಂಟೆಂಟ್ ಓರಿಯೆಂಟ್ ಸಿನಿಮಾ. ಅಬ್ಬರ, ಆಕ್ಷನ್, ಬಿಲ್ಡಪ್ ಸಿನಿಮಾವಲ್ಲ. ಸೂಪರ್ ಕಥೆ. ಈ ಕಥೆ ನಿಮಗೆ ಖಂಡಿತ ಇಷ್ಟವಾಗುತ್ತದೆ ಎಂದರು.
ನಟಿ ಜಾಹ್ನವಿ ಮಾತನಾಡಿ, ಅಧಿಪತ್ರ ಸಿನಿಮಾದ ಟ್ರೇಲರ್ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಈಗಾಗಲೇ 1 ಮಿಲಿಯನ್ ವೀವ್ ಕಂಡಿದೆ. ಅದೇ ಹೇಳುತ್ತಿದೆ ಜನರಿಗೆ ನಮ್ಮ ಚಿತ್ರದ ಕಂಟೆಂಟ್ ಇಷ್ಟವಾಗಿದೆ ಎಂದು. ಯಾರೇ ಟ್ರೇಲರ್ ನೋಡಿದ್ರೂ ಅದ್ಭುತ ಮೇಕಿಂಗ್, ಕ್ಯೂರಿಯಾಸಿಟಿ ಇದೆ. ಟ್ವಿಸ್ಟ್ ಅಂಡ್ ಟರ್ನ್ ಇದೆ ಎಂದು ಹೇಳುತ್ತಿದ್ದಾರೆ. ನಿರ್ದೇಶಕರಾದ ಚಯನ್ ಸರ್ , ನಿರ್ಮಾಪಕ ಕುಲುದೀಪ್ ಅವರಿಗೆ, ಸಹ ನಿರ್ಮಾಪಕರಾದ ಕಾರ್ತಿಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ, ಶ್ವೇತಾ ರವಿಚಂದ್ರ ಶೆಟ್ಟಿ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ. ದಿಗ್ಗಜರ ಸಿನಿಮಾದಲ್ಲಿ ನಾನು ನಟಿಸಿರುವುದು ನನಗೆ ಸಿಕ್ಕ ದೊಡ್ಡ ಅವಕಾಶ,. ಟ್ರೇಲರ್ ಗೆ ಸಿಕ್ಕ ರೆಸ್ಪಾನ್ಸ್ ಸಿನಿಮಾಗೂ ಕೊಡಿ ಎಂದು ಹೇಳಿದರು.
ನಿರ್ದೇಶಕರಾದ ಚಯನ್ ಶೆಟ್ಟಿ ಮಾತನಾಡಿ, ಅಧಿಪತ್ರ ಟೀಸರ್, ಟ್ರೇಲರ್ ಹಾಗೂ ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ ಫೆಬ್ರವರಿ 7ರಂದು ಸಿನಿಮಾ ತೆರೆಗೆ ಬರ್ತಿದೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ. ನಿಮ್ಮ ಆಶೀರ್ವಾದ ಅಧಿಪತ್ರ ಮೇಲೆ ಇರಲಿ ಎಂದರು.
ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಕರಾವಳಿಯ ಆಟಿ ಕಳೆಂಜ ಕಥೆಗೆ ನಿರ್ದೇಶಕ ಚಯನ್ ಶೆಟ್ಟಿ ದೃಶ್ಯ ರೂಪ ಕೊಟ್ಟಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಚಯನ್ ಒಂದೊಳ್ಳೆ ಕಥೆಯನ್ನು ಪ್ರೇಕ್ಷಕರ ಮುಂದೆ ಹರವಿಡಲು ಹೊರಟ್ಟಿದ್ದಾರೆ. ಇವರ ವಿಷನ್ ಗೆ ಕೆ. ಆರ್ ಸಿನಿ ಕಂಬೈನ್ಸ್ ಬ್ಯಾನರ್ನಡಿ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮಿ ಗೌಡ ಬಂಡವಾಳ ಹೂಡಿದ್ದಾರೆ. ಬೆಳಕು ಫಿಲಂಸ್ ಅಡಿಯಲ್ಲಿ ಕಾರ್ತಿಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ, ಶ್ವೇತಾ ರವಿಚಂದ್ರ ಶೆಟ್ಟಿ ಕೂಡ ಸಹ-ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ.
ಅಧಿಪತ್ರ ಚಿತ್ರದಲ್ಲಿ ರೂಪೇಶ್ ಶೆಟ್ಟಿ, ನಿರೂಪಕಿ ಜಾಹ್ನವಿ ಜೊತೆಯಲ್ಲಿ ಎಂ.ಕೆ.ಮಠ, ಕಾಂತಾರ ಚಿತ್ರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ದೀಪಕ್ ರೈ, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ. ಶ್ರೀಹರಿ ಶ್ರೇಷ್ಠಿ ಸಂಗೀತ, ಶ್ರೀಕಾಂತ್ ಸಂಕಲನ, ರಿತ್ವಿಕ್ ಮುರುಳಿಧರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಟ್ರೇಲರ್ ಮೂಲಕ ಆಮಂತ್ರಣ ಕೊಟ್ಟಿರುವ ಅಧಿಪತ್ರ ಸಿನಿಮಾ ತಂಡ ಫೆಬ್ರವರಿ 7ಕ್ಕೆ ಚಿತ್ರವನ್ನು ತೆರೆಗೆ ತರುತ್ತಿದೆ.
Be the first to comment