ನಟಿ ಪ್ರೇಮಾ ನಟನೆಯ ‘ವರಾಹ ಚಕ್ರಂ’ ಶೀರ್ಷಿಕೆ ಅನಾವರಣ ; ​ಮಂಜು ಮಸ್ಕಲ್ ಮಟ್ಟಿ ನಿರ್ದೇಶನ

ದಶಕದ ಹಿಂದೆ ಮನಸುಗಳ ಮಾತು ಮಧುರ, ಯುಗಪುರುಷ, ಗೌರೀಪುತ್ರ ಚಿತ್ರಗಳನ್ನು ನಿರ್ದೇಶಿಸಿದ್ದ ಮಂಜು ಮಸ್ಕಲ್ ಮಟ್ಟಿ ಅವರು ಬಹಳ ವರ್ಷಗಳ ನಂತರ, ಆಧುನಿಕ ಪಂಚ ಪಾಂಡವರನ್ನಿಟ್ಟುಕೊಂಡು, ವಿಭಿನ್ನ ಕಥಾನಕದೊಂದಿಗೆ ಚಿತ್ರ ನಿರ್ದೇಶನಕ್ಕೆ ಮರಳಿದ್ದಾರೆ. ತಮ್ಮ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ವಿಭಿನ್ನವಾಗಿ ಆಯೋಜಿಸಿದ್ದರು.

ಹಿರಿಯನಟಿ ಪ್ರೇಮಾ, ಸಾಯಿಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರದ ಹೆಸರು ‘ವರಾಹಚಕ್ರಂ’. ಈ ಚಿತ್ರವನ್ನು ಮನ್ವಂತರಿ ಮೂವಿಮೇಕರ್ಸ್ ಅಡಿಯಲ್ಲಿ ಒಂದಷ್ಟು ಸ್ನೇಹಿತರೆಲ್ಲ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಂಜು ಮಸ್ಕಲ್ ಮಟ್ಟಿ ನಾನು ಆಕ್ಟರ್ ಆಗಬೇಕೆಂದೇ ಫಿಲಂ ಇಂಡಸ್ಟ್ರಿಗೆ ಬಂದವನು. ನಿರ್ಮಾಪಕನಾಗಿ ಒಂದಷ್ಟು ಕಳೆದುಕೊಂಡೆ, ಸಿನಿಮಾ ವಿತರಣೆ ಕೂಡ ಮಾಡಿದೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ರೂಲ್ಸ್, ಸಂಸ್ಕ್ರತಿಯ ಕಗ್ಗೊಲೆ, ದೌರ್ಜನ್ಯಗಳಿಗೆ ಫುಲ್ ಸ್ಟಾಪ್ ಕೊಟ್ಟು ಅವೇರ್ ನೆಸ್ ನೀಡುವ

ಕಥೆ ಇಟ್ಟುಕೊಂಡು ವರಾಹಚಕ್ರಂ ಕಥೆ ಹೆಣೆದಿದ್ದೇನೆ. ಇದರಲ್ಲಿ ಸಾಕಷ್ಟು ಒಳ್ಳೆಯ ಅಂಶಗಳಿವೆ. ಪ್ರೇಮಾ ಅವರ ನಮ್ಮೂರ ಮಂದಾರ ಹೂವೆ ಸಿನಿಮಾ ನೋಡಿ ನಾನು ನಿರ್ದೇಶಕನಾಗಬೇಕೆಂದು ಕನಸು ಕಂಡಿದ್ದೆ, ಈಗ ಅವರನ್ನು ಹಾಕಿಕೊಂಡೇ ಸಿನಿಮಾ ಮಾಡುತ್ತಿದ್ದೇನೆ. ಅವರದು ಗಟ್ಟಿಯಾದ ಪಾತ್ರ, ಆಕ್ಷನ್ ಕೂಡ ಮಾಡ್ತಿದ್ದಾರೆ. ಸಾಯಿಕುಮಾರ್ ಅವರೂ ಸಹ ಕಥೆ ಕೇಳಿ ಒಪ್ಪಿದರು. ಹಿಂದೆ ನನ್ನ ಯುಗಪುರುಷದಲ್ಲಿ ನಟಿಸಿದ್ದ ಅರ್ಜುನ್ ದೇವ ನಾಯಕನಾಗಿ ನಟಿಸುತ್ತಿದ್ದಾರೆ. ಅವರ ಜೊತೆ ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಪಂಚಪಾಂಡವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರದ ಬಗ್ಗೆ ವಿವರಿಸಿದರು.

ನಟಿ ಪ್ರೇಮಾ ಮಾತನಾಡಿ ನಿರ್ದೇಶಕರು ಮನೆಗೆ ಬಂದು ಈ ಕಥೆ ಹೇಳಿದರು. ಪೂರ್ತಿ ಕಥೆ ಕೇಳಿದಾಗ ಇನ್ ಸ್ಪಿರೇಷನ್ ಆಯ್ತು. ಪಾತ್ರವೂ ನಾನು ಹಿಂದೆ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾಗಿದೆ ಅನಿಸಿತು. ಹಾಗಾಗಿ ಒಪ್ಪಿದೆ, ಈ ಸಿನಿಮಾ ನಿರ್ದೇಶಕರ ಕನಸು ಎಂದು ಹೇಳಿದರು. ಚಿತ್ರಕ್ಕೆ ಸಾಹಿತ್ಯ, ಸಂಗೀತ ಸಂಯೋಜನೆಯ ಜೊತೆ ಪ್ರಮುಖ ಪಾತ್ರವನ್ನೂ ಸಹ ಮಾಡುತ್ತಿರುವ

ಡಾ.ವಿ. ನಾಗೇಂದ್ರಪ್ರಸಾದ್ ಮಾತನಾಡಿ ಮಂಜು ಬಹಳ ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದುಕೊಂಡು ಸಿನಿಮಾ ಪರಿಭಾಷೆ ಅರಿತಿದ್ದಾರೆ. ಒಂದಷ್ಟು ಜನ ಸ್ನೇಹಿತರನ್ನು ಸೇರಿಸಿಕೊಂಡು, ಸಮಾಜದಲ್ಲಿ ನಡೆಯುತ್ತಿರುವ ಅನೇಕ ವಿಷಯಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಕಥೆ ಆಕ್ಷನ್, ಫ್ಯಾಮಿಲಿ ಜೊತೆಗೆ ಎಂಟರ್ ಟೈನಿಂಗ್ ಆಗಿದೆ. ಬಹಳ ದಿನಗಳ ನಂತರ ಈ ಚಿತ್ರಕ್ಕೆ ಡೈಲಾಗ್ ಕೂಡ ಬರೆಯುತ್ತಿದ್ದೇನೆ. ಈ ಸಿನಿಮಾಗೋಸ್ಕರ ಎರಡು ತಿಂಗಳನ್ನು ಮೀಸಲಿಟ್ಟಿದ್ದೇನೆ. ಅಲ್ಲದೆ ನನ್ನ ಮೊದಲ ಚಿತ್ರ ಗಾಜಿನ ಮನೆಯಲ್ಲಿ ಅಭಿನಯಿಸಿದ್ದ ಪ್ರೇಮಾ ಅವರಿಗೆ ಡೈಲಾಗ್ ಬರೆಯಲು ಖುಷಿ ಅನ್ಸುತ್ತೆ. ಚಿತ್ರದಲ್ಲಿ ತುಂಬಾ ಸ್ಟ್ರೆಂತ್ ಇರುವಂಥ ಪಾತ್ರವನ್ನೂ ಸಹ ಮಾಡುತ್ತಿದ್ದೇನೆ ಎಂದರು.

ನಿರ್ಮಾಪಕರಾದ ಅರವಿಂದ್ ಗಗನ್ ಸೇರಿದಂತೆ ಉಳಿದೆಲ್ಲ ಕಲಾವಿದರು ಚಿಕ್ಕದಾಗಿ ಮಾತನಾಡಿದರು. ಚಿತ್ರಕ್ಕೆ ಶರತ್‌ಕುಮಾರ್ ಜಿ. ಅವರ ಛಾಯಾಗ್ರಹಣ, ಭಾರ್ಗವ ಅವರ ಸಂಕಲನವಿದೆ. ಲಾವಣ್ಯ ಗ್ರೂಪ್, ನಾಗಭೂಷಣ್ ಎಂ.ರಾವ್, ಮಂಜುನಾಥ್ ಸಿ.ಗೌಡ್ರು, ಕೆ.ಎಸ್.ಜೈ ಸುರೇಶ್ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಬೆಂಗಳೂರು, ನೆಲ್ಲೂರು, ಪೊಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವಾರು ಲೊಕೇಶನ್ ಗಳಲ್ಲಿ ವರಾಹಚಕ್ರಂ ಚಿತ್ರೀಕರಣಗೊಳ್ಳಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!