ಬಾಲಿವುಡ್ ನಟಿ ಕಂಗನಾ ರಾಣಾವತ್ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ನಾನು ಕುಟುಂಬದವರ ಜತೆ ಕಾಂತಾರ ನೋಡಿದ್ದೇನೆ. ಇದೊಂದು ಸ್ಫೋಟಕ ಅನುಭವ. ರಿಷಬ್ ಶೆಟ್ಟಿ ನಿಮಗೆ ಹ್ಯಾಟ್ಸ್ ಆಫ್. ಬರವಣಿಗೆ, ನಿರ್ದೇಶನ, ನಟನೆ, ಆಯಕ್ಷನ್ ಎಲ್ಲವೂ ಬ್ರಿಲಿಯಂಟ್. ಒಂದು ವಾರಗಳ ಕಾಲ ಈ ಹ್ಯಾಂಗೋವರ್ನಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಕಂಗನಾ ವಿಡಿಯೋದಲ್ಲಿ ಹೇಳಿದ್ದಾರೆ.
ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ದಕ್ಷಿಣ ಕನ್ನಡದ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಕರಾವಳಿ ಭಾಗದ ಸಾಂಸ್ಕೃತಿಕ ಆಚರಣೆ ಚಿತ್ರದ ಹೈಲೈಟ್ ಆಗಿದೆ.
ಹೊಂಬಾಳೆ ಫಿಲಂಸ್ ಈ ಚಿತ್ರವನ್ನು ನಿರ್ಮಿಸಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.
‘ಕಾಂತಾರ’ ಸಿನಿಮಾ ಇಲ್ಲಿವರೆಗೆ 170 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಹೇಳಲಾಗಿದೆ. ಈ ವರ್ಷ ತೆರೆಗೆ ಬಂದ ಕನ್ನಡದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಇದಾಗಿದೆ. ಮೊದಲ ಸ್ಥಾನದಲ್ಲಿ ಯಶ್ ನಟನೆಯ ‘ಕೆಜಿಎಫ್ 2’ ಇದೆ.

___

Be the first to comment