ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಅವರು ಇಂದು ನಿಧನರಾಗಿದ್ದಾರೆ.
ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ನಟಿಸಿದ್ದರು. ಕನ್ನಡದಲ್ಲಿ ಜಮುನಾ 8 ಚಿತ್ರಗಳಲ್ಲಿ ನಟಿಸಿದ್ದರು. ‘ತೆನಾಲಿ ರಾಮಕೃಷ್ಣ’, ‘ಭೂಕೈಲಾಸ’ ಮೊದಲಾದ ಸಿನಿಮಾಗಳಲ್ಲಿ ಜಮುನಾ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ ಸುಮಾರು 100 ಚಿತ್ರಗಳಲ್ಲಿ ಅವರು ನಟಿಸಿದ್ದರು. ಜಮುನಾ ಅವರು ಚಿಕ್ಕ ವಯಸ್ಸಿನಲ್ಲಿ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು.
ಹಿಂದಿ ಚಿತ್ರರಂಗದಲ್ಲೂ ಜಮುನಾ ಬಣ್ಣ ಹಚ್ಚಿದ್ದಾರೆ. ಜಮುನಾ ಅವರ ನಟನೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಜಮುನಾ ಅವರು ನಟನೆಯ ಜತೆಗೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 1980ರಲ್ಲಿ ಅವರು ಕಾಂಗ್ರೆಸ್ ಗೆ ಸೇರ್ಪಡೆ ಆದರು.
1989ರಲ್ಲಿ ಜಮುನಾ ಅವರು ರಾಜಮಂಡ್ರಿಯಿಂದ ಸಂಸದೆಯಾಗಿ ಆಯ್ಕೆ ಆದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸೋತರು. ಆ ಬಳಿಕ ರಾಜಕೀಯದಿಂದ ದೂರ ಉಳಿದರು.
ಜಮುನಾ ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
___
Be the first to comment