ಚಂದನವನದಲ್ಲಿ ಉತ್ತಮ ಪಾತ್ರಗಳ ನಿರೀಕ್ಷೆಯಲ್ಲಿರುವ ಸುಂದರ ಮುದ್ದು ಮುಖದ ಚೆಲುವೆ ನಟಿ ಬಿಂದುಶ್ರೀ. ಒಳ್ಳೆ ನಿರ್ಮಾಣ ಸಂಸ್ಥೆ ಅಥವಾ ಪಾತ್ರವು ಶಕ್ತಿಶಾಲಿಯಾಗಿದ್ದರೆ ಎಲ್ಲದಕ್ಕೂ ಸೈ ಎಂದು ಪ್ರಸಕ್ತ ಚಿತ್ರರಂಗಕ್ಕೆ ಬರುವ ಕಲಾವಿದೆಯರು ಹೇಳುವುದುಂಟು. ಅಪರೂಪ ಎನ್ನುವಂತೆ ನಮ್ಮ ಕರ್ನಾಟಕ ಸಂಸ್ಕ್ರತಿ ಬಿಂಬಿಸುವಂತ ಪಾತ್ರಗಳು ಬಂದರೆ ಮಾಡುತ್ತೇನೆ.
ಬಾಲನಟಿಯಿಂದ ನಾಯಕಿಯವರೆಗೆ:
ಯಾವುದೇ ದೊಡ್ಡ ಬ್ಯಾನರ್ ಸಿಗುತ್ತದೆ ಅಂಥ ಬೇರೆ ತರಹದ ರೋಲ್ ಮಾಡಲಾರೆ. ಇದು ಹೊಸ ಪ್ರತಿಭೆ ಚನ್ನಗಿರಿ ಮೂಲದ ನಿರಾಡಂಬರ ಚೆಲುವೆ ಬಿಂದುಶ್ರೀ ಖಡಕ್ ನುಡಿಗಳು. ಪುಟಾಣಿಯಾಗಿದ್ದಾಗಲೇ ಬಾಲನಟಿಯಾಗಿ ಶ್ರೀರಸ್ತುಶುಭಮಸ್ತು, ಶಿವಪ್ಪನಾಯಕ, ಪ್ರೀತ್ಸೋದ್ ತಪ್ಪಾ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಚಿತ್ರಗಳು, ಕಾವ್ಯಂಜಲಿ, ಗೌತಮಿ ಮೆಗಾ ಧಾರವಾಹಿಗಳಲ್ಲಿ ನಟಿಸಿ ಓದಿನ ಸಲುವಾಗಿ ನಟನೆಗೆ ಗುಡ್ ಬೈ ಹೇಳಿದ್ದರು. ಅಪ್ಪ ಸಿವಿಲ್ ಇಂಜಿನಿಯರ್ ಆಗಿದ್ದು, ಅವರ ಆದೇಶದಂತೆ ಅದೇ ಪದವಿಯಲ್ಲಿ ಹದಿನಾರನೇ ರ‍್ಯಾಂಕ್ ಗಳಿಸಿದರು.
ಪ್ರತಿಷ್ಠಿತ ಕಂಪೆನಿಯಲ್ಲಿ ಟೆಕ್ಕಿಯಾಗಿ ಮೂರು ವರ್ಷ ಕೆಲಸ. ಗೃಹಿಣಿಯಾಗಿದ್ದ ಅಮ್ಮ ಶಾಸ್ತ್ರೀಯ ಸಂಗೀತ ಕಲಿತಿದ್ದು, ವೃತ್ತಿಪರ ಗಾಯಕಿ ಅಲ್ಲ. ಅವರ ಆಸೆಯಂತೆ ಅಪ್ಪನನ್ನು ಮನವೊಲಿಸಿ, ಉಮೇದಿನಿಂದ ಮರಳಿ ನಟನೆಯ ಬದುಕಿಗೆ ಮರಳಿದ್ದಾರೆ. ಇದರ ಪರಿಣಾಮವೇ ’ಮಹಿಷಾಸುರ’ ಚಿತ್ರದಲ್ಲಿ ನಟಿಸಿದ್ದು, ಮೊನ್ನೆಯಷ್ಟೇ ಬಿಡುಗಡೆಯಾಗಿತ್ತು.
ಎರಡನೇ ಚಿತ್ರ ’ಲಡ್ಡು’ ಸದ್ಯದಲ್ಲೆ ತೆರೆಗೆ ಬರಲಿದೆ. ’ಮಿ. ಅಂಡ್ ಮಿಸಸ್ ಜಾನು’ದಲ್ಲಿ ಬ್ಯುಸಿ ಇದ್ದು, ಇನ್ನು ಮೂರು ಕತೆಗಳನ್ನು ಕೇಳಲಾಗಿ, ಮಾತುಕತೆ ನಡೆಯುತ್ತಿದೆ. ಎಲ್ಲವು ಓಕೆ ಅಂದರೆ ತಿಳಿಸುವುದು ಸೂಕ್ತವಂತೆ. ಕೈತುಂಬ ಸಂಬಳ ಸಿಗುವ ಉದ್ಯೋಗಕ್ಕೆ ಬೆನ್ನು ತೋರಿಸಿ, ಬಣ್ಣದ ಲೋಕಕ್ಕೆ ಬಂದದ್ದು ಖುಷಿ ಅನಿಸಿದೆ.
ನಾನು ಹೇಗಿದ್ದೀನೋ ಅಂತಹುದೆ ರೋಲ್ ಮಾಡಬೇಕಂಬ ಬಯಕೆ. ಅಪ್ಪನಿಗೂ ಇದೇ ತರಹದ ಪಾತ್ರ ಮಾಡಬೇಕೆಂದು ಸಲಹೆ, ಸೂಚನೆ ನೀಡಿದ್ದಾರೆ. ನಾಯಕಿಯಾಗಿರುವುದನ್ನು ನೋಡಲು ತಾಯಿ ಇಲ್ಲವೆಂಬುದೇ ಬೇಗುದಿಯಾಗಿದೆ ಎನ್ನುತ್ತಾರೆ. ಇಬ್ಬರು ತಂಗಿಯರಿಗೆ ಅಭಿನಯ ಆಸಕ್ತಿ ಇರುವುದಿಲ್ಲ.
ಅಂದು ರವಿಚಂದ್ರನ್, ಸೌಂದರ್ಯ, ಇಂದು ರಾಧಿಕಾಪಂಡಿತ್, ದರ್ಶನ್ ಅಭಿಮಾನಿಯಾಗಿದ್ದಾರೆ. ಆಮದು ನಟಿಯರ ಮುಂದೆ ಇಂತಹ ಕಲಾವಿದರಿಗೂ ಅವಕಾಶ ಮಾಡಿಕೊಟ್ಟರೆ, ಒಳ್ಳೆ ಪ್ರತಿಭೆಗಳು ಹೊರಬರುತ್ತಾರೆ ಎಂಬುದಕ್ಕೆ ಬಿಂದುಶ್ರೀ ಸಾಕ್ಷಿಯಾಗಿ ನಿಲ್ಲುತ್ತಾರೆ.
Be the first to comment