ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ನಟಿ ಕುಟುಂಬಸ್ಥರ ಅನುಮತಿ ಇಲ್ಲದೆ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ನಟಿ ಮೃತಪಟ್ಟಿದ್ದಾರೆ ಎಂದು ಆಪ್ತರು ದೂರಿದ್ದಾರೆ.
ಸೊಂಟದ ದಪ್ಪ ತೆಗೆಯಲು ಫ್ಯಾಟ್ ರಿಯಾಕ್ಷನ್ ಸರ್ಜರಿ ಎಂದು ಕರೆಯಲಾಗುವ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ನಟಿ ಒಳಗಾಗಿದ್ದರು ಎನ್ನಲಾಗಿದೆ. ರಾಜಾಜಿನಗರ ಬಳಿ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಚೇತನಾ ಅವರ ದೇಹದ ಕೊಬ್ಬು ತೆಗೆಯುವ ವೇಳೆ, ಶ್ವಾಸಕೋಶಕ್ಕೆ ನೀರು ಸೇರಿಕೊಂಡಿದ್ದು, ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
22 ವರ್ಷ ವಯಸ್ಸಿನ ಚೇತನಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಪೋಷಕರು ದೂರಿದ್ದಾರೆ. ಪೋಷಕರು ವೈದ್ಯರು ಹಾಗೂ ಆಸ್ಪತ್ರೆ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
“ನಾವು ಯಾರು ಈ ಟ್ರೀಟ್ಮೆಂಟ್‌ಗೆ ಒಪ್ಪಿ ಸಹಿ ಹಾಕಿರಲಿಲ್ಲ. ಆಕೆಯ ಸ್ನೇಹಿತರು ಜೊತೆಗಿದ್ದರು. ನಾವು ಬರುವಷ್ಟರಲ್ಲೇ ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆ ಸರಿಯಾಗಿ ಆಗದೆ ದುರಂತ ನಡೆದಿದೆ” ಎಂದು ಪೋಷಕರು ದೂರಿದ್ದಾರೆ.
ಬೆಂಗಳೂರಿನ ಅಬ್ಬಿಗೆರೆ ಮೂಲದ ಚೇತನಾ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದರು. ‘ಹವಾಯಾಮಿ’ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅವರು ‘ಒಲವಿನ ನಿಲ್ದಾಣ’, ‘ಗೀತಾ’, ದೊರೆಸಾನಿ’ ಸೇರಿದಮತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತೆರೆಕಾಣಬೇಕಿರುವ ಸಿನಿಮಾ ಒಂದರಲ್ಲಿ ಚೇತನಾ ಅಭಿನಯಿಸಿದ್ದಾರೆ.
__
Be the first to comment