ʼಸೆನ್ಸಾರ್ʼ ಪ್ರಮಾಣ ಪತ್ರ ಸಿಗಲು ಲಂಚ ಕೊಡಬೇಕು ಎಂದು ತಮಿಳು ನಟ ವಿಶಾಲ್ ಕೃಷ್ಣ ಆರೋಪ ಮಾಡಿದ್ದಾರೆ.
ವಿಶಾಲ್ ಕೃಷ್ಣ ಅವರ ಸಿನಿಮಾ ʼಮಾರ್ಕ್ ಆಂಟೋನಿʼ ಸೆಪ್ಟೆಂಬರ್ 15ರಂದು ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗಿತ್ತು. ಇದೀಗ ಹಿಂದಿ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿದೆ.
ಹಿಂದಿಯಲ್ಲಿ ಚಿತ್ರ ಬಿಡುಗಡೆ ಮಾಡುವ ವೇಳೆ ವಿಶಾಲ್ ಕೃಷ್ಣ ಸಿಬಿಎಫ್ಸಿ ಭೃಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾದ ಹಿಂದಿ ಆವೃತ್ತಿಗಾಗಿ ಸಿಬಿಎಫ್ಸಿಯಿಂದ ಸೆನ್ಸಾರ್ ಪ್ರಮಾಣ ಪತ್ರ ಸ್ವೀಕರಿಸುವ ಸಂದರ್ಭದಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ವಿಶಾಲ್ ಕೃಷ್ಣ ಸಿನಿಮಾದ ಸ್ಕ್ರೀನಿಂಗ್ಗಾಗಿ 6.5 ಲಕ್ಷ ರೂಪಾಯಿ ಪಾವತಿ ಮಾಡಿದ್ದೇನೆ. ಇದರಲ್ಲಿ 3 ಲಕ್ಷ ಸ್ಕ್ರೀನಿಂಗ್ಗೆ ಹಾಗೂ 3.5 ಲಕ್ಷ ರೂಪಾಯಿ ಸೆನ್ಸಾರ್ಶಿಪ್ ಪ್ರಮಾಣ ಪತ್ರಕ್ಕೆ ಖರ್ಚು ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸಿನಿಮಾಗಳಲ್ಲಿ ಭ್ರಷ್ಟಾಚಾರದ ಬಗ್ಗೆ ತೋರಿಸುತ್ತಿರುವುದು ಸರಿಯಾಗಿದೆ. ಆದರೆ ನಿಜ ಜೀವನದಲ್ಲಿ ಅದನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಿಬಿಎಫ್ಸಿ ಮುಂಬೈ ಕಚೇರಿಯಲ್ಲಿ ಭ್ರಷ್ಟಾಚಾರ ಅತ್ಯಂತ ಕೆಟ್ಟದಾಗಿ ನಡೆಯುತ್ತಿದೆ. ನನ್ನ ಮಾರ್ಕ್ ಆಂಟನಿ ಸಿನಿಮಾದ ಹಿಂದಿ ಆವೃತ್ತಿಗಾಗಿ ನಾನು 6.5 ಲಕ್ಷ ರೂಪಾಯಿ ಲಂಚ ಪಾವತಿ ಮಾಡಬೇಕಾಗಿ ಬಂದಿದೆ. ನನ್ನ ವೃತ್ತಿ ಜೀವನದಲ್ಲಿಯೇ ನನಗೆ ಹಿಂದೆಂದೂ ಇಂಥ ಅನುಭವ ಆಗಿರಲಿಲ್ಲ ಎಂದು ಹೇಳಿದ್ದಾರೆ.
ಲಂಚಾವತಾರದ ಬಗ್ಗೆ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮೋದಿಯವರ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಇದು ನನಗಾಗಿ ಮಾಡುತ್ತಿಲ್ಲ. ಭವಿಷ್ಯದ ನಿರ್ಮಾಪಕರ ಹಿತದೃಷ್ಟಿಯಿಂದ ಮಾಡುತ್ತಿದ್ದೇನೆ. ನನ್ನ ದುಡಿಮೆಯ ಹಣ ಇಂದು ಭ್ರಷ್ಟಾಚಾರಕ್ಕೆ ಖರ್ಚಾಗಿದೆ. ಸತ್ಯವು ಒಂದಲ್ಲ ಒಂದು ದಿನ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಅಧಿಕ್ ರವಿಚಂದ್ರನ್ ನಿರ್ದೇಶನದ, ಮಾರ್ಕ್ ಆಂಟೋನಿ ಸಿನಿಮಾ ಸೆ. 15ರಂದು ತಮಿಳಿನಲ್ಲಿ ಬಿಡುಗಡೆಯಾಗಿದೆ. ವಿಶಾಲ್ ಹಾಗೂ ಎಸ್ಜೆ ಸೂರ್ಯ ನಾಯಕರಾಗಿ ನಟಿಸಿರುವ ಈ ಸಿನಿಮಾ ದರೋಡೆಕೋರರ ಬದುಕನ್ನು ಆಧರಿಸಿದ ಸಿನಿಮಾವಾಗಿದೆ. ತಮಿಳು ಆವೃತ್ತಿಗೆ ಈಗಾಗಲೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ತಮಿಳಿನಲ್ಲಿ ಈ ಚಿತ್ರ ರೂ. 55 ಕೋಟಿ ಗಳಿಸಿದೆ. ತೆಲುಗು ರಾಜ್ಯಗಳಲ್ಲಿ ರೂ. 9 ಕೋಟಿ, ಕರ್ನಾಟಕ , ಇತರ ರಾಜ್ಯಗಳಲ್ಲಿ ರೂ. 10 ಕೋಟಿ, ವಿದೇಶದಲ್ಲಿ ರೂ. 17 ಕೋಟಿ ಗಳಿಸಿದೆ. ಇಲ್ಲಿಯವರೆಗೆ ಒಟ್ಟು 92 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ವ್ಯಾಪಾರ ಮೂಲಗಳು ತಿಳಿಸಿವೆ
Be the first to comment