ಕನ್ನಡದ ಕಿರುತೆರೆಯ ಪ್ರಖ್ಯಾತ ಕಲಾವಿದ ಶ್ರೀಧರ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿ ಗುರುತೇ ಸಿಗದಷ್ಟು ಬದಲಾಗಿದ್ದು ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಧರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಧರ್ ಅವರ ಅನಾರೋಗ್ಯದ ಕುರಿತು ಕಮಲಿ ಖ್ಯಾತಿಯ ಅಂಕಿತಾ ಮಾಹಿತಿ ಹಂಚಿಕೊಂಡಿದ್ದು ವಿಡಿಯೋ ಮೂಲಕ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
“ನಾನು ಮೊದಲು ಏಕಾಂಗಿಯಾಗಿರಲಿಲ್ಲ. ನನಗೆ ಮದುವೆ ಆಗಿತ್ತು. ಹನ್ನೊಂದು ವರ್ಷ ಸಂಸಾರ ಮಾಡಿದ್ದೆ. ಐದು ವರ್ಷದ ಮಗ ನನಗೆ ಇದ್ದಾನೆ. ಆದರೆ ಅವಳಿಗೆ ಇಂಡಿಪೆಂಡೆಂಟ್ ಲೈಫ್ ಬೇಕಿತ್ತು. ಹೀಗಾಗಿ ಒಂದು ದಿನ ನಾನು ಚಿತ್ರೀಕರಣಕ್ಕೆ ತೆರಳಿದ್ದಾಗ ನನ್ನ ಮನೆಯಲ್ಲಿರುವ ಗ್ಯಾಸ್ ಸ್ಟವ್ ಕೂಡ ಬಿಡದೇ ನನ್ನ ಮಗನನ್ನು ಕರೆದುಕೊಂಡು ಓಡಿ ಹೋದಳು. ನನ್ನ ದುಡ್ಡೆಲ್ಲ ತೆಗೆದುಕೊಂಡು ಆ ದುಡ್ಡಿನಲ್ಲಿ ಜಾಗ ಖರೀದಿಸಿ ನಿನ್ನ ಹೆಸರಿಗೆ ಮಾಡಿಸುತ್ತೇನೆ ಎಂದು ಹೇಳಿ ಎಲ್ಲ ಅವರ ಅಪ್ಪನ ಹೆಸರಿಗೆ ಮಾಡಿಸಿದಳು” ಎಂದು ಶ್ರೀಧರ್ ಮನದ ನೋವನ್ನು ಹಂಚಿಕೊಂಡಿದ್ದಾರೆ.
‘ಒಮ್ಮೊಮ್ಮೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಬೇಜಾರಾದಾಗಲೆಲ್ಲಾ ನಾನು ಊಟ ಬಿಟ್ಟಿದ್ದೀನಿ. ಈಗ ಆಯುರ್ವೇದಿಕ್ ಚಿಕಿತ್ಸೆ ಉಲ್ಟಾ ಹೊಡೆದಿದೆ. ಅನಾರೋಗ್ಯಕ್ಕೀಡಾದ ನಂತರ ನಾನು ಒಬ್ಬನೇ ಆಸ್ಪತ್ರೆಗೆ ಓಡಾಡುತ್ತಿದ್ದೆ. ಆಗ ನನ್ನ ಪರಿಸ್ಥಿತಿ ಗಮನಿಸಿ ನನ್ನ ಜೊತೆ ಕೆಲಸ ಮಾಡುವ ಕಲಾವಿದರು ಸಹಾಯಕ್ಕೆ ಬಂದರು. ನನ್ನ ಅಮ್ಮನಿಗೆ ಕೂಡ ವಿಚಾರ ತಿಳಿಯಿತು. ಅವರು ವಿಕ್ಟೋರಿಯಾ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು” ಎಂದು ಶ್ರೀಧರ್ ಮಾತನಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘”ನನಗೆ ಯಾವ ದುರಭ್ಯಾಸ ಇಲ್ಲ. ನಾನು ಬದುಕಬೇಕು. ಮೊದಲಿನಂತೆ ಆಗಬೇಕು. ಹಲವು ತಿಂಗಳಿಂದ ಮನೆಯ ಬಾಡಿಗೆ ಕಟ್ಟಿಲ್ಲ. ನಟನೆಯ ಜೊತೆ ನಾನು ಇಡ್ಲಿ, ದೋಸೆ, ವಡೆ ಮಾರುತ್ತಿದ್ದೆ. ಸದ್ಯ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ನನ್ನ ಜೊತೆ ಕೆಲಸ ಮಾಡಿದ ಧಾರಾವಾಹಿಯ ಎರಡು ಮೂರು ಸ್ನೇಹಿತರು ಬಂದು ಮಾತನಾಡಿಸಿಕೊಂಡು ಹೋಗಿದ್ದಾರೆ. ದಿನಕ್ಕೆ ಹತ್ತು ಹನ್ನೆರಡು ಸಾವಿರ ಖರ್ಚಾಗುತ್ತಿದೆ. ಏನಾದರೂ ಟೆಸ್ಟ್ ಮಾಡಿಸಿದರೆ ಬಿಲ್ ಇನ್ನು ಹೆಚ್ಚಾಗುತ್ತೆ. ಈಗಾಗಲೇ ಮೂರು ಲಕ್ಷ ಖರ್ಚು ಆಗಿದೆ. ಐಸಿಯುನಲ್ಲಿ ದಾಖಲಾದರೆ ಒಂದು ದಿನಕ್ಕೆ 60 ಸಾವಿರ ಬೇಕಂತೆ. ಆ ಹಂತಕ್ಕೆ ಹೋಗದೇ ಇರಲಿ ಎಂದು ನಾನು ಬೇಡಿಕೊಳ್ಳುತ್ತಿದ್ದೇನೆ. ಸದ್ಯ ನನ್ನ ತಾಯಿ ಈಗ ನೋಡಿಕೊಳ್ಳುತ್ತಿದ್ದಾರೆ. ದಿನದ ಖರ್ಚಿಗೆ ಹಣ ಸಿಕ್ಕರೆ ಸಾಕು ಎನ್ನುವಂತಾಗಿದೆ ” ಎಂದು ನೋವನ್ನು ಹೊರ ಹಾಕಿದ್ದಾರೆ.
—–

Be the first to comment