“ಕಾಂತಾರ” ಜಾತಿ, ಧರ್ಮ ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ ಎಂದು ನಟ ಕಿಶೋರ್ ಹೇಳಿದ್ದಾರೆ.
ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ನಟ ಚೇತನ್ ಹೇಳಿಕೆ ಬೆನ್ನಿಗೇ, ಕಿಶೋರ್ ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಕಾಂತಾರ ಮತ್ತು ಧರ್ಮ ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಸಿ ಕಳಕಳಿಯ ಮನವಿ. ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿ ಹೋದೀತು ಎಂದಿದ್ದಾರೆ.
ಕೇವಲ ಓಟಿಗಾಗಿ ಪಟೇಲ್ ಗಾಂಧಿ ಬೋಸ್ ನೆಹ್ರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ,ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನ ಒಂದು ಕ್ಷಣ ಯೋಚಿಸಿ. ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ ಎಂದು ಮನವಿ ಮಾಡಿದ್ದಾರೆ.
Be the first to comment