ಚಿತ್ರ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಕಿರುತೆರೆ ನಟ ತಾಂಡವೇಶ್ವರ ಅಲಿಯಾಸ್ ತಾಂಡವನನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಸಿನಿಮಾ ನಿರ್ಮಾಣದ ಕುರಿತು ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ತಾಂಡವೇಶ್ವರ್ ಅವರು ತಮ್ಮ ಬಳಿಯಿದ್ದ ಬಂದೂಕಿನಿಂದ ಚಿತ್ರ ನಿರ್ದೇಶಕ ಭರತ್ ನವುಂದರತ್ತ ಗುಂಡು ಹಾರಿಸಿದ್ದರು. ಆಗ ಅವರು ತಪ್ಪಿಸಿಕೊಂಡಿದ್ದರಿಂದ ಗುಂಡು ಕಚೇರಿ ಕೊಠಡಿಯ ಮೇಲ್ಚಾವಣಿಗೆ ತಾಗಿತ್ತು.
‘ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸನದ ತಾಂಡವೇಶ್ವರ ಅವರು ‘ಜೋಡಿಹಕ್ಕಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಚಿತ್ರ ನಿರ್ದೇಶಕ ಭರತ್ ನವುಂದ ಅವರೊಂದಿಗೆ ‘ದೇವನಾಂಪ್ರಿಯ’ ಚಿತ್ರ ನಿರ್ಮಾಣಕ್ಕೆ ಮಾತುಕತೆ ನಡೆದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ತಾಂಡವೇಶ್ವರ ಹಂತ ಹಂತವಾಗಿ ನಿರ್ದೇಶಕರಿಗೆ ₹6 ಲಕ್ಷ ನೀಡಿದ್ದರು.
ಈ ಮಧ್ಯೆ ಚಿತ್ರ ನಿರ್ಮಾಣಕ್ಕೆ ಹಾಸನ ಕುಮಾರಸ್ವಾಮಿ ಹಣ ಹೂಡಿಕೆ ಮಾಡಿದ್ದರು. ಚಿತ್ರ ನಿರ್ಮಾಣ ಕೆಲಸ ಆರಂಭಗೊಂಡು ಎರಡು ವರ್ಷ ಕಳೆದರೂ ಚಿತ್ರೀಕರಣ ಪೂರ್ಣಗೊಂಡಿರಲಿಲ್ಲ. ವಿಳಂಬ ಆಗಿದ್ದರಿಂದ ಹಣ ವಾಪಸ್ ನೀಡುವಂತೆ ತಾಂಡವೇಶ್ವರ ಅವರು ಭರತ್ ಅವರನ್ನು ಕೇಳಿದ್ದರು. ಈ ಸಂಬಂಧ ಚರ್ಚಿಸಲು ಚಂದ್ರಾ ಲೇಔಟ್‌ನ ಬಸವೇಶ್ವರ ಬಡಾವಣೆಯ ನಿರ್ಮಾಪಕ ಕಚೇರಿಯಲ್ಲಿ ಸೋಮವಾರ ಸಂಜೆ ಸಭೆ ನಡೆಯುತ್ತಿತ್ತು. ಆಗ ಆರೋಪಿ ಗುಂಡು ಹಾರಿಸಿದ್ದರು.
ನಿರ್ದೇಶಕ ನೀಡಿದ ದೂರು ಆಧರಿಸಿ ಬಿಎನ್‌ಎಸ್ 109, ಶಸ್ತ್ರಾಸ್ತ್ರ ಕಾಯ್ದೆ ಕಲಂ 3, 27, 30ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
ರವಿಚಂದ್ರನ್ ಮಗ ಮನೋರಂಜನ್ ನಾಯಕನಾಗಿ ನಟಿಸಿದ್ದ ‘ಮುಗಿಲ್‌ಪೇಟೆ’ ಸಿನಿಮಾವನ್ನು ಭರತ್ ನಿರ್ದೇಶಿಸಿದ್ದರು.
Be the first to comment