ಇನ್ನು ಮುಂದೆ ಫೈಟರ್ ಗಳಿಗೆ ವಿಮೆ ಕಡ್ಡಾಯ

ಕನ್ನಡ ಚಿತ್ರಗಳ ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಫೈಟರ್ ಗಳಿಗೆ ಇನ್ನು ಮುಂದೆ ಇನ್ಶೂರೆನ್ಸ್ ಮಾಡಿಸುವುದು ಕಡ್ಡಾಯ ಆಗಲಿದೆ.

ಸಾಹಸ ದೃಶ್ಯದಲ್ಲಿ ಪಾಲ್ಗೊಳ್ಳುವ ಫೈಟರ್ ಗಳು ಸೇರಿದಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಎಲ್ಲಾ ಕಾರ್ಮಿಕರಿಗೂ ಇನ್ಶೂರೆನ್ಸ್ ಮಾಡಬೇಕು ಎನ್ನುವ ನಿಯಮವನ್ನು ನವೆಂಬರ್ 1ರಿಂದ ಜಾರಿಗೊಳಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ.

ಸಾಹಸ ದೃಶ್ಯಗಳ ಚಿತ್ರೀಕರಣ ಸಂದರ್ಭದಲ್ಲಿ ಪದೇಪದೇ ಜೀವಹಾನಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ. ಚಿತ್ರೀಕರಣ ನಡೆಯುವ ಸ್ಥಳದಲ್ಲಿ ವೈದ್ಯರು ಸೇರಿದಂತೆ ಆಂಬುಲೆನ್ಸ್, ನರ್ಸ್, ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಇರುವುದು ಕಡ್ಡಾಯವಾಗಿದೆ. ವಿಮೆ ಇದ್ದವರಿಗೆ ಮಾತ್ರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲು ನಿರ್ಧರಿಸಲಾಗಿದೆ.

ಈ ನಿಯಮದ ಪ್ರಕಾರ ಇನ್ನು ಮುಂದೆ ಗುಂಪು ವಿಮೆಯನ್ನು ನಿರ್ಮಾಪಕರು ಮಾಡಿಕೊಳ್ಳಬೇಕಾಗುತ್ತದೆ. ಅಂತೆಯೇ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ನುರಿತ ಫೈಟ್ ಮಾಸ್ಟರ್ಸ್ ಇರಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಿದೆ.

ಕೆಲ ವಾರಗಳ ಹಿಂದೆ ರಾಮನಗರದ ಜೋಗನಪಾಳ್ಯದಲ್ಲಿ ‘ಲವ್ ಯೂ ರಚ್ಚು’ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಮೆಟಲ್ ರೋಪ್ , ಹೈಟೆನ್ಷನ್ ವೈರ್ ಗೆ ತಗುಲಿದ ಕಾರಣ ಫೈಟರ್ ವಿವೇಕ್ ಎನ್ನುವವರು ಸ್ಥಳದಲ್ಲೇ ಮೃತ ಪಟ್ಟಿದ್ದರು. ಈ ವೇಳೆ ರಂಜಿತ್ ಎನ್ನುವವರು ಗಾಯಗೊಂಡಿದ್ದರು.
ವರ್ಷದ ಹಿಂದೆ ದುನಿಯಾ ವಿಜಯ್ ಹೀರೋ ಆಗಿರುವ ಮಾಸ್ತಿ ಸಿನೆಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಉದಯ್, ಅನಿಲ್ ಎನ್ನುವ ಕಲಾವಿದರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದರು.

ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ಪದೇಪದೇ ಅವಘಡ ಆಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಠಿಣ ಕ್ರಮಕ್ಕೆ ಮುಂದಾಗಿದೆ.
_____________

Be the first to comment

Leave a Reply

Your email address will not be published. Required fields are marked *

Translate »
error: Content is protected !!