ದಕ್ಷಿಣ ಕನ್ನಡದ ಪ್ರಸಿದ್ದ ಕ್ರೀಡೆಯ ಕುರಿತಾಗಿ ಬರುತ್ತಿರುವ “ವೀರ ಕಂಬಳ” ಚಿತ್ರದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕ ಅರುಣ್ ರೈ ತೋಡಾರು ಅವರ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ನಿರ್ಮಾಣವಾಗಿದೆ. “ಚಿನ್ನಾರಿಮುತ್ತ” ವಿಜಯ ರಾಘವೇಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ “ಅಭೇದ್ಯಂ” ಎಂದು ಹೆಸರಿಡಲಾಗಿದೆ. ಸಂದೀಪ್ ಬಾರಾಡಿ ಕಥೆ ಬರೆದು ನಿರ್ದೇಶಿಸಿದ್ದಾರೆ. “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಯುವಾ ಶೆಟ್ಟಿ ಚಿತ್ರಕಥೆ ಬರೆದು ಕಾಸ್ಟಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ನಟನೆಯನ್ನು ಮಾಡಿದ್ದಾರೆ. ಯುವಾ ಶೆಟ್ಟಿ ಹಾಗೂ DBC ಶೇಖರ್ ಸಂಭಾಷಣೆ ಬರೆದಿದ್ದಾರೆ.
ಭೇದಿಸಲಾಗದ್ದನ್ನು “ಅಭೇದ್ಯಂ” ಎನ್ನುತ್ತಾರೆ. ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ ಎನ್ನುತ್ತಾರೆ ನಿರ್ದೇಶಕ ಸಂದೀಪ್ ಬಾರಾಡಿ.
ವರುಣ್ ಉನ್ನಿ ಕೊಚ್ಚಿನ್, ಕಿಶೋರ್, ಕುಮಾರ್ ಶೆಟ್ಟಿ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಮಯೂರ್ ಆರ್ ಶೆಟ್ಟಿ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ, ಮಾಸ ಮಾದ ಸಾಹಸ ನಿರ್ದೇಶನ, ಮಹೇಶ್ ಎಣ್ಮೂರ್ ಅವರ ಕಲಾ ನಿರ್ದೇಶನ ಹಾಗೂ ಸೂರಜ್(ಕಾಮಿಡಿ ಕಿಲಾಡಿಗಳು), ತರುಣ್ ರಾಜ್ ನೃತ್ಯ ನಿರ್ದೇಶನವಿದೆ. ಪ್ರಜ್ನೇಶ್ ಶೆಟ್ಟಿ ಅವರ ನಿರ್ಮಾಣ ನಿರ್ವಹಣೆಯಿರುವ “ಅಭೇದ್ಯಂ” ಚಿತ್ರದ ಕಾರ್ಯಕಾರಿ ನಿರ್ಮಾಪಕರು ರಾಜೇಶ್ ಕುಡ್ಲ.
ವಿಜಯ ರಾಘವೇಂದ್ರ ಅವರು ನಾಯಕರಾಗಿ ನಟಿಸಿರುವ “ಅಭೇದ್ಯಂ” ಚಿತ್ರದ ತಾರಾಬಳಗದಲ್ಲಿ ರೋಶನ್ ವೇಗಸ್, ಸಿಂಚನ ಪಿ ರಾವ್, ಸುಂದರ್ ವೀಣ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ಮೋಹನ್ ಶೇಣಿ, ಯುವಾ ಶೆಟ್ಟಿ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ, ಪ್ರವೀಣ್ ಜೈನ್, ಸೂರಜ್ ಪಾಂಡೇಶ್ವರ್, ಸೂರ್ಯ ಕುಂದಾಪುರ, ರಾದೇಶ್ ಶೆಣೈ ಮುಂತಾದವರಿದ್ದಾರೆ.

Be the first to comment