ಸ್ಯಾಂಡಲ್​ವುಡ್​​ನಲ್ಲಿ ‘ಆ ಒಂದು ಕನಸು’ಕಾಣಲು ಹೊರಟ ಹೊಸಬರ ತಂಡ

ರಂಗು ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಆ ಒಂದು ಕನಸು ಚಿತ್ರದ ಮುಹೂರ್ತ ಗುರುವಾರ ರಾಜರಾಜೇಶ್ವರಿ ನಗರದ ನಿಮಿಷಾಂಭಾ ದೇವಸ್ಥಾನದಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಜಕುಮಾರ್ ಆಗಮಿಸಿ ಕ್ಲಾಪ್ ಮಾಡಿದರೆ, ನಿವೃತ್ತ ಶಾಲಾ ಶಿಕ್ಷಕರಾದ ಬಾಲಕೃಷ್ಣ ಎಚ್​. ಎಂ ಕ್ಯಾಮರಾಕ್ಕೆ ಚಾಲನೆ ನೀಡಿದರು.

ಬಳಿಕ ಚಿತ್ರದ ಬಗ್ಗೆ ಮಾಹಿತಿ ನೀಡಲು ಮುಂದಾದ ತಂಡ, ಸಿನಿಮಾದ ಕಥೆ, ಪಾತ್ರವರ್ಗ ಮತ್ತು ಚಿತ್ರೀಕರಣದ ಒಂದಷ್ಟು ವಿಚಾರಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿತು. ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಷ್ಣು ನಾಚನೇಕರ್, ಇಲ್ಲಿಯವರೆಗೂ ನಾನು 22 ಸಿನಿಮಾಗಳಿಗೆ ಅಸೋಸಿಯೇಟ್ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ.

ಹಲವು ಧಾರಾವಾಹಿಗಳಿಗೆ ನಿರ್ದೇಶಕನಾಗಿ, ಸಂಚಿಕೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದೇನೆ. ಇದೀಗ ಪೂರ್ಣ ಪ್ರಮಾಣದ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಆ ಒಂದು ಕನಸು ಚಿತ್ರದ ಮೂಲಕ ಸಿಕ್ಕಿದೆ’ ಎಂದರು.ನಾನು ಮತ್ತು ಈ ಚಿತ್ರದ ನಾಯಕ ವಿಶ್ವಾಸ್, ಈ ಮೊದಲೇ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದೇವು. ಆದರೆ, ಅದು ಮುಂದೂಡುತ್ತಲೇ ಬಂದಿತು.

ಇದೀಗ ಆ ಒಂದು ಕನಸು ಮೂಲಕ ಇಬ್ಬರ ಕನಸು ಈಡೇರಿದೆ. ನಿರ್ಮಾಪಕ ದಿಲೀಪ್ ಅವರಿಂದ ಈ ಸಿನಿಮಾ ಶುರುವಾಗಿದೆ. ಅಂದಹಾಗೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ, ಕಮರ್ಷಿಯಲ್ ಅಂಶಗಳನ್ನು ಇದರಲ್ಲಿ ಬೆರೆಸಲಿದ್ದೇವೆ. ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.

ಇನ್ನುಳಿದ ಭಾಗ ಸಾಗರ ಮತ್ತು ಶಿವಮೊಗ್ಗದಲ್ಲಿ ನಡೆಯಲಿದೆ ಎಂದರು ನಿರ್ದೇಶಕ ವಿಷ್ಣು ಚಿತ್ರ ನಾಯಕ ವಿಶ್ವಾಸ ಮಾತನಾಡಿ, ವೈಯಕ್ತಿಕ ಸಮಸ್ಯೆಗಳಿಂದ ಕಳೆದ ಐದಾರು ವರ್ಷಗಳಿಂದ ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದೆ.

ಇದೀಗ ಅದೆಲ್ಲವನ್ನು ನಿವಾರಿಸಿಕೊಂಡು ಮತ್ತೆ ಬಂದಿದ್ದೇನೆ. ತಮಿಳಿನ ಉದಯಂ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಕಥೆಯೇ ಈ ಚಿತ್ರದಲ್ಲಿ ಹೀರೋ. ಇದರಲ್ಲಿ ತುಂಬ ಸಾಫ್ಟ್ ಪಾತ್ರ ನನ್ನದು. ಹಲ್ಲಿ ಕಂಡರೂ ಹೆದರುವಂಥ ಪಾತ್ರ. ಇಂದಿನಿಂದಲೇ ಚಿತ್ರೀಕರಣ ಶುರು ಎಂದರು.

ಚಿತ್ರದ ನಿರ್ಮಾಪಕ ದಿಲೀಪ್ ಬಿ.ಎಂ ಮಾತನಾಡಿ, ನಮ್ಮದು ಲಾಜಿಸ್ಟಿಕ್ ಬಿಸಿನೆಸ್. ಸಿನಿಮಾ ಕ್ಷೇತ್ರದಲ್ಲಿಯೂ ಆಸಕ್ತಿ ಇತ್ತು. ಆದರೆ ಅದರ ಹಿಂದಿನ ಕೆಲಸಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತಿರಲಿಲ್ಲ. ಈ ಚಿತ್ರದ ಮೂಲಕ ಅದನ್ನು ತಿಳಿದುಕೊಳ್ಳಲು ನಿರ್ಮಾಣಕ್ಕಿಳಿದಿದ್ದೇನೆ. ಒಳ್ಳೆ ಕಥೆ ಮತ್ತು ಒಳ್ಳೆ ತಂಡ ಸಿಕ್ಕಿದೆ ಎಂದರು.

ಇನ್ನು ಈ ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಕನಸು ಕಾಣುವುದು ಮತ್ತು ಕಂಡ ಕನಸನ್ನು ನಸು ಮಾಡಿಕೊಳ್ಳುವ ಹಾದಿಯಲ್ಲಿ ಈ ಸಿನಿಮಾ ಸಾಗುತ್ತದೆ. ಇಲ್ಲಿ ಕನಸು ಕಾಣುವವರಾರು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎಂದರು ಸಾಯಿಕೃಷ್ಣ.

ಚಿತ್ರದ ನಾಯಕಿಯಾಗಿ ಧನ್ಯಶ್ರೀ ನಟಿಸುತ್ತಿದ್ದು, ಕಥೆ ಕೇಳಿ ಕುತೂಹಲಿಗಳಾಗಿದ್ದಾರೆ. ನಾನು ಮೂಲತಃ ಶಿವಮೊಗ್ಗದವಳು. ಕನಸು ನನಸಾಗಬೇಕೆಂದರೆ ಏನೆಲ್ಲ ಮಾಡಬೇಕು. ನಮ್ಮ ರ್ಶರಮ ಎಷ್ಟು ಮುಖ್ಯ ಎಂಬುದನ್ನು ಸಸ್ಪೆನ್ಸ್ ಥ್ರಿಲ್ಲರ್ ರೀತಿಯಲ್ಲಿ ಹೇಳಲು ಹೊರಟಿದ್ದಾರೆ ಎಂದು ಖುಷಿ ಹಂಚಿಕೊಂಡರು.

ಹಾಸ್ಯ ಪಾತ್ರದಲ್ಲಿ ಅಮಿತ್ ನಟಿಸಿಲಿದ್ದು, ಅವರೂ ಸಹ ಮುಹೂರ್ತ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ನಾಯಕನ ಜತೆಯಲ್ಲಿಯೇ ಸಾಗುವ ಪಾತ್ರ ನನ್ನದು. ಒಳ್ಳೇ ಪಾತ್ರ ಸಿಕ್ಕಿದೆ. ತಂಡಕ್ಕೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದರು. ಚೆನ್ನೈನಿಂದ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದ ಉದಯಂ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ತಮಿಳಿನಲ್ಲಿಯೇ ಮಾತನಾಡಿ ತಂಡಕ್ಕೆ ಹರಸಿದರು.

ತಾರಾಗಣದಲ್ಲಿ ಬಾಲ ರಾಜವಾಡಿ, ಮಾ. ಚಿರಾಯು ಚಕ್ರವರ್ತಿ, ಅಮಿತ್, ಗಿರೀಶ್ ಶಿವಣ್ಣ, ರಮೇಶ್ ಭಟ್, ಗಿರಿಜಾ ಲೋಕೇಶ್ಮ ಕುರಿ ಬಾಂಡ್ ರಂಗ, ಹರ್ಷವರ್ಧನ್, ಶ್ವೇತಾ ರಾವ್ ಮತ್ತು ಜಯಶ್ರೀ ನಟಿಸಲಿದ್ದಾರೆ. ಇನ್ನು ಅಭಿಷೇಕ್ ಜಿ ರಾಯ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಕಥೆ, ಚಿತ್ರಕಥೆ ಉದಯಂ, ವೀನಸ್ ಮೂರ್ತಿ ಛಾಯಾಗ್ರಹಣ, ಸುಜನ್ ಅವರ ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಹೈಟ್ ಮಂಜು ಮತ್ತು ಸ್ಟಾರ್ ಗಿರಿ ನೃತ್ಯ ನಿರ್ದೇಶನ, ಎಂ.ಪಿ ಲೋಕೇಶ್ ವೈ ಮಲ್ಲಾಪುರ, ರಿಷಿಕೇಶ್ ನಿರ್ಮಾಣ ನಿರ್ವಹಣೆ, ಅಮೃತ್ ಜೋಗಿ ಅವರ ಕಲಾ ನಿರ್ದೇಶನ ಮಾಡಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!