“ಆಡೇ ನಮ್ಮ GOD” ಸಿನಿಮಾದ ಟೀಸರ್ ಬಿಡುಗಡೆ ; ಇದು ಪಿ.ಎಚ್.ವಿಶ್ವನಾಥ್ ನಿರ್ದೇಶನದ ಚಿತ್ರ!

ಹಿರಿಯ ನಿರ್ದೇಶಕ ಪಿ ಎಚ್. ವಿಶ್ವನಾಥ್. ಬಿ.ಬಿ.ಆರ್ ಫಿಲ್ಮಂಸ್ ಹಾಗೂ ಎವೆರೆಸ್ಟ್ ಇಂಡಿಯಾ ಎಂಟರ್ ಟೈನರ್ಸ್ ಬ್ಯಾನರ್ ನಡಿ ಪ್ರೊ.ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿರುವ ಆಡೇ ನಮ್ಮ God ಸಿನಿಮಾದ ಟೀಸರ್ ಬೆಂಗಳೂರಿನ ಸುಚಿತ್ರ ಅಕಾಡೆಮಿಯಲ್ಲಿಂದು ಬಿಡುಗಡೆ ಮಾಡಲಾಯಿತು.

ಆಡನ್ನು ದೇವರಾಗಿ ಪೂಜೆ ಮಾಡಿದಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ಹಾಸ್ಯಾಸ್ಪದವಾಗಿ ಕಟ್ಟಿಕೊಡಲಾಗಿದೆ. ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್, ಮಂಜುನಾಥ್ ಜಂಬೆ, ಅಜಿತ್ ಬೊಪ್ಪನಹಳ್ಳಿ, ಪಿಂಕಿ ಎಲ್ಲಿ ಚಿತ್ರದ ಅನೂಪ್ ಶೂನ್ಯ, ಸಾರಿಕ ರಾವ್, ಬಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಂಚಮ ವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಸಿನಿಮಾಗಳ ಖ್ಯಾತಿ ಹಿರಿಯ ನಿರ್ದೇಶಕ ಪಿ.ಎಚ್.ವಿಶ್ವನಾಥ್ ಆಡೇ ನಮ್ಮ‌ God ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಿರ್ದೇಶಕರಾದ ಪಿ.ಎಚ್.ವಿಶ್ವನಾಥ್ ಮಾತನಾಡಿ, ಜನಗಳು ಯಾವುದಾದರೂ ಒಂದು ವಿಷಯಕ್ಕೆ ಬೇಗ ಪ್ರಭಾವಕ್ಕೆ ಒಳಗಾಗುತ್ತಾರೆ. ನಮ್ಮಲ್ಲಿ ಹಂದಿಯನ್ನು ವರಾಹ ಎಂದು ಪೂಜೆ ಮಾಡುತ್ತೇವೆ. ಹಾವು, ಕಪ್ಪೆ ಮೊಸಳೆ ಎಲ್ಲವನ್ನೂ ಪೂಜೆ ಮಾಡುತ್ತವೆ. ನಾವು ಪೂಜೆ ಮಾಡದ ಪ್ರಾಣಿಗಳು ಇಲ್ಲ. ಆಂದ್ರದ ಬಾರ್ಡರ್ ಊರೊಂದರಲ್ಲಿ ಚೇಳು ಸ್ವಾಮಿ ದೇಗುಲವಿದೆ ಜೀವಂತ ಚೇಳುಗಳನ್ನು ಪೂಜೆ ಮಾಡುತ್ತಾರೆ. ಈ ಬಗ್ಗೆ ಯೋಚನೆ ಮಾಡುತ್ತಾ ನಾನು ಕಂಡ ಒಬ್ಬ ವ್ಯಕ್ತಿ ಮತ್ತು ನನಗೇ ಆದ ಅನುಭವಗಳ ಆಧಾರದ ಮೇಲೆ ಆಡು‌ ಕೂಡ ಒಂದು ದೇವರು ಆಗಬಹುದು ಅನ್ನಿಸಿ ಅದನ್ನೇ ಚಿತ್ರವಾಗಿಸಿದ್ದೇವೆ. ಮೂಢನಂಬಿಕೆ ನಂಬಿಕೊಂಡು ಹೋಗುವ ಜನರ ಹಿಂದೆ ಇಡೀ ಸಿನಿಮಾವಿದೆ. ನಾಲ್ಕು ಜನ ಯುವಕರ ಜೀವನದಲ್ಲಿ ಒಂದು ಆಡು ಬಂದಾಗ ಏನಾಗುತ್ತದೆ ಎನ್ನುವುದು ಚಿತ್ರದ ತಿರುಳು. ನಾಲ್ಕೂ ಜನ ಯುವಕರು ಯಾವ ನುರಿತ ಕಲಾವಿದರಿಗಿಂತ ಕಡಿಮೆ ಇಲ್ಲದಂತೆ ನಟಿಸಿದ್ದು, ಚಿತ್ರವನ್ನು ಮನರಂಜನೆಯೊಂದಿಗೆ ಪ್ರೇಕ್ಷಕರಿಗೆ ಖುಷಿಕೊಡುವ ರೀತಿಯಲ್ಲಿ, ಕೊನೆಯವರೆಗೂ ಹಾಸ್ಯಮಯವಾಗಿ ಕಟ್ಟಿಕೊಡಲಾಗಿದೆ, ಆಡೇ ನಮ್GOD ಯಾವ ಕಟ್ಸ್ ಇಲ್ಲದೇ ಸೆನ್ಸಾರ್ ಆಗಿ ಬಿಡುಗಡೆಯ ಸಿದ್ಧತೆಯಲ್ಲಿದೆ ಎಂದರು.

ನಿರ್ಮಾಪಕರಾದ ಪ್ರೊ.ಬಿ.ಬಸವರಾಜ್ ಮಾತನಾಡಿ, ನಾನು ರಿಟೈಡ್ ಪ್ರೊಫೆಸರ್. ನಾನು ಮೊದಲಿನಿಂದಲೂ ಸಿನಿಮಾ ನೋಡುತ್ತಿದ್ದೆ. ನನಗೂ ಸಿನಿಮಾ ನಿರ್ಮಾಣ ಮಾಡುವ ಆಸೆ ಇತ್ತು. ರಿಟೈಡ್ ಆದ ಹತ್ತು ವರ್ಷದ ಬಳಿಕ ನನ್ನ ಆಸೆ ನೆರವೇರಿದೆ. ಪಿ ಎಚ್ ವಿಶ್ವನಾಥ್ ಹೆಸರಾಂತ ನಿರ್ದೇಶಕರು. ಆರು ತಿಂಗಳು ಲೋಕೇಷನ್ ನೋಡಿದೆವು. ಮೈಸೂರು ಹಾಗು ಬೆಂಗಳೂರಿನ ಸುತ್ತ ಮುತ್ತ ಯಾವ ರೀತಿಯ ಅಡಚಣೆಯೂ ಇಲ್ಲದೆ ಸರಾಗವಾಗಿ ಚಿತ್ರ ಮುಗಿದಿದೆ. ಸಿನಿಮಾ ಬಹಳ ಚೆನ್ನಾಗಿ ಬಂದಿದೆ ಎಂದರು.

ನಟ ನಟರಾಜ್ ಮಾತನಾಡಿ, ಪುಟ್ಟಣ್ಣ ಕಣಗಾಲ್ ಸರ್ ಬಗ್ಗೆ ನಾವು ಕೇಳುತ್ತಿದ್ದೆವು. ಅವರ ಶಿಷ್ಯ ಅಂದರೆ ಹೇಗೆ ಇರ್ತಾರೆ ಎಂಬ ಭಯ ಇತ್ತು. ನೀನು ಮಾಡಿರುವ ಸಿನಿಮಾ ಎಲ್ಲಾ ನೋಡಿದ್ದೇನೆ ಕಥೆ ಹೇಳಬಹುದಾ ಎಂದರು.

ಪಿ.ಕೆ.ಎಚ್ ದಾಸ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಅಕ್ಷಯ್ ವಿಶ್ವನಾಥ್ ಚಿತ್ರಕಥೆ-ಸಹ ನಿರ್ದೇಶನ ‘ಆಡೇ ನಮ್ God’ ಚಿತ್ರಕ್ಕಿದೆ. ಆರ್.ಕೆ. ಸ್ವಾಮಿನಾಥನ್ ಸಂಗೀತ, ಶಶಿಕುಮಾರ್ ಎಸ್ ಹಿನ್ನೆಲೆ ಸಂಗೀತದ ಹಾಡುಗಳಿಗೆ ಹೃದಯ ಶಿವ-ನಿತಿನ್ ನಾರಾಯಣ್ ಸಾಹಿತ್ಯ ಬರೆದಿದ್ದು, ರವೀಂದ್ರ ಸೊರಗಾವಿ-ಚೇತನ್ ನಾಯಕ್ ಧ್ವನಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರವನ್ನು ತೆರೆಗೆ ತರಲು ತಂಡ ತಯಾರಿ ನಡೆಸುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!