ಹನಿಟ್ರ್ಯಾಪ್ ಮಾಡಿದ ಆರೋಪದ ಮೇರೆಗೆ ಉದಯೋನ್ಮುಖ ನಟನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಬಂಧಿತ ಆರೋಪಿ. ಆರೋಪಿ ಮಿಸ್ಟರ್ ಭೀಮರಾವ್ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಎನ್ನಲಾಗಿದೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ನಟ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ ಎನ್ನಲಾಗುತ್ತಿದೆ. ಉದ್ಯಮಿಗೆ ಪರಿಚಯ ಆಗಿದ್ದ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ. ಬಳಿಕ ಉದ್ಯಮಿಯನ್ನು ಭೇಟಿಯಾಗಿ ತಾನು ಕ್ರೈಂ ಪೊಲೀಸ್ ಎಂದು ಸುಳ್ಳು ಹೇಳಿ ಹೆದರಿಸಿದ್ದ. ಇಬ್ಬರು ಯುವತಿಯರ ಜೊತೆಗೆ ಅಶ್ಲೀಲ ಮೆಸೇಜ್ ಮಾಡಿದ್ದ ಪರಿಣಾಮ ಕೇಸ್ ದಾಖಲಾಗಿದೆ ಎಂದು ಹೆದರಿಸಿದ್ದ.
ಬಳಿಕ ಈ ಕೇಸನ್ನು ನಿಲ್ಲಿಸುತ್ತೇವೆ ಎಂದು ಹೇಳಿ ಹಣ ವಸೂಲಿಗೆ ಮುಂದಾಗಿದ್ದ ಎನ್ನುವ ಆರೋಪ ಕೇಳಿಬಂದಿದೆ. ಯುವರಾಜ್ ಬೆದರಿಕೆಗೆ ಹೆದರಿ ಉದ್ಯಮಿ ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣ ಕೊಟ್ಟಿದ್ದಾರೆ ಎನ್ನಲಾಗಿದೆ. ಬಳಿಕ ಉದ್ಯಮಿ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ನಟಿಸಿರುವ ಮಿಸ್ಟರ್ ಭೀಮರಾವ್ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ‘ಯು ಟರ್ನ್ 2’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರು ಓಬಯ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿ 4 ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣಮಾಡಲು ಪ್ಲಾನ್ ಮಾಡಲಾಗಿದೆ. ಇತ್ತೀಚಿಗೆ ಸಿನಿಮಾದ ಟೈಟಲ್ ಪೋಸ್ಟರ್ ನ್ನು ನಟ ಚೇತನ್ ರಿಲೀಸ್ ಮಾಡಿ ಸಿನಿಮಾತಂಡಕ್ಕೆ ಶುಭ ಹಾರೈಸಿದ್ದರು.
Be the first to comment