‘ಆ ದಿನಗಳಿಂದ ಈ ದಿನಗಳವರೆಗೆ …’ ಮುಹೂರ್ತ

ಹೊಸಬರ ತಂಡದ ‘ಆ ದಿನಗಳಿಂದ ಈ ದಿನಗಳವರೆಗೆ …’  ಚಿತ್ರದ ಮುಹೂರ್ತ ನಡೆದಿದೆ.

ಒಂದೇ ವೇದಿಕೆಯಲ್ಲಿ ಹೊಸಬರ ತಂಡ ಎರಡು ಚಿತ್ರಗಳನ್ನು ಒಟ್ಟಿಗೆ ಪ್ರಾರಂಭಿಸಿದೆ. ‘ಆ ಈ’  , ‘ರಾಜ ದೇವ ಸಿಂಧು’  ಈ ಎರಡೂ ಚಿತ್ರಗಳನ್ನು ಒಂದೇ ಸಂಸ್ಥೆ ನಿರ್ಮಿಸುತ್ತಿದ್ದು, ದುರ್ಗಾ ಮೋಹನ್‍ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಎರಡೂ ಚಿತ್ರಗಳಲ್ಲಿ ಭಾರ್ಗವ್‍ ನಾಯಕನಾಗಿ ಅಭಿನಯಿಸುತ್ತಿದ್ದಾರೆ.  ಆರ್‌.ಎಸ್‌.ಪಿ ಪ್ರೊಡಕ್ಷನ್ಸ್ ಹಾಗೂ ಚಿನ್ಮಯ್ ಸಿನಿ ಕ್ರಿಯೇಶನ್ಸ್ ಸಂಸ್ಥೆಗಳಡಿ ಲಕ್ಷ್ಮೀ ಹರೀಶ್‍ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ದುರ್ಗಾ ಮೋಹನ್‍, ‘ಕೆಲವು ದಿನಗಳ ಹಿಂದೆ ಒಂದು ಫ್ಯಾಶನ್‍ ಶೋನಲ್ಲಿ ನಾನು ಮತ್ತು ಭಾರ್ಗವ್‍ ಇಬ್ಬರೂ ತೀರ್ಪುಗಾರರಾಗಿದ್ದೆವು.  ಅಲ್ಲಿಂದ ಪ್ರಾರಂಭವಾದ ನಮ್ಮ ಗೆಳೆತನ, ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ನನಗೂ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಒಂದು ಕಥೆ ಸಹ ಹೇಳಿದೆ. ಅವರಿಗೂ ಇಷ್ಟವಾಗಿ ಅವರು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದ್ದಾರೆ. ನಾನು ‘ನವ ದಿಗಂತ’ ಎಂಬ ಚಿತ್ರ ಮಾಡುತ್ತಿದ್ದೇನೆ. ಅದು ಅರ್ಧ ಮುಗಿದಿದೆ.  ಅದು ಮುಗಿಸಿದ ಮೇಲೆ ‘ಆ ಈ’ ಪ್ರಾರಂಭವಾಗಲಿದೆ’ ಎಂದರು.

‘‘ಆ ದಿನಗಳಿಂದ ಈ ದಿನಗಳವರೆಗೂ’ ಹೆಸರು ದೊಡ್ಡದಾಗುತ್ತದೆ ಎನ್ನುವ ಕಾರಣಕ್ಕೆ ಬರೀ ‘ಆ ಈ’ ಎಂದು ಇಟ್ಟಿದ್ದೇವೆ. ಅರ್ಧ ಕಥೆ ಹಳ್ಳಿಯಲ್ಲಿ ನಡೆದರೆ, ಇನ್ನರ್ಧ ಕಾರ್ಪೋರೇಟ್ ಪರಿಸರದಲ್ಲಿ ನಡೆಯುತ್ತಿದೆ.  ಪ್ರೇಕ್ಷಕರಿಗೆ ಈ ಚಿತ್ರ ನೋಡಿದಾಗ ಮೂರು ಚಿತ್ರಗಳ ಅನುಭವವಾಗುತ್ತದೆ. ಬೆಂಗಳೂರಿನ ಬಸವನಗುಡಿ, ಮಲ್ಲೇಶ್ವರ ಮುಂತಾದ ಪ್ರದೇಶಗಳು ಸಾಂಪ್ರದಾಯಿಕ ಪ್ರದೇಶಗಳಾದರೆ, ಸರ್ಜಾಪುರ ಮುಂತಾದ ಕಡೆ ಕಾರ್ಪೋರೇಟ್‍ ಸಂಸ್ಕೃತಿಗಳಿವೆ. ಇವೆರಡನ್ನೂ ಇಟ್ಟುಕೊಂಡು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.

‘ಕಾಶೀನಾಥ್‍ ಅವರ ಚಿತ್ರಗಳಲ್ಲಿ ಸಂದೇಶದ ಜೊತೆಗೆ ಹಾಸ್ಯವಿರುತ್ತಿತ್ತು. ಈ ಚಿತ್ರದಲ್ಲಿ ನಾವು ಆ  ಪ್ರಯತ್ನ ಮಾಡಿದ್ದೇವೆ. ಬೆಂಗಳೂರಿನಲ್ಲೇ ಬಹುತೇಕ ಚಿತ್ರೀಕರಣ ನಡೆಯಲಿದೆ. ಇನ್ನೊಂದು ಹಂತದಲ್ಲಿ ಬೆಂಗಳೂರು ಸುತ್ತಮುತ್ತದ ಹಳ್ಳಿಯಲ್ಲಿ ಚಿತ್ರೀಕರಣ ಮಾಡಲಿದ್ದೇವೆ’ ಎಂದರು.

‘ಆ ದಿನಗಳು ಚೆನ್ನಾಗಿತ್ತು ಎಂದು ಕೆಲವರು ಹೇಳುತ್ತಾರೆ. ಕೆಲವರು ಈಗಲೇ ಚೆನ್ನಾಗಿದೆ ಎನ್ನುತ್ತಾರೆ. ಎರಡನ್ನೂ ತೆಗೆದುಕೊಂಡರೇ ಜೀವನ ಎಂದು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಭಾರ್ಗವ್‍ ಇಲ್ಲಿ ಅಪ್ಪ-ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಅವರಿಗೆ ಮೂರು ಶೇಡ್‍ಗಳಿರುವ ಪಾತ್ರವಿದೆ. ಶ್ವೇತಾ, ಮೊನಿಕಾ, ಚಾವಿ, ಆರಾ  ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಘವೇಂದ್ರ ರಾಜಕುಮಾರ್‍ ಮತ್ತು ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು.

ಭಾರ್ಗವ್‍ ಮಾತನಾಡಿ, ‘ಇದು ನನ್ನ 7ನೇ ಚಿತ್ರ.  ಈ ಚಿತ್ರದಲ್ಲಿ  ಮೊದಲ ಬಾರಿಗೆ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಿತ್ರದಲ್ಲಿ ನಾಲ್ಕು ರೀತಿಯ ಪ್ರೀತಿ ಇದೆ. ಪ್ರತಿಯೊಬ್ಬರಿಗೂ ಒಂದು ಪಾಠವಿದೆ.  ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ ’ ಎಂದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!