ಖ್ಯಾತ ನಿರ್ದೇಶಕ ಎ ಟಿ ರಘು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಎ ಟಿ ರಘು 5-6 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಬೆಂಗಳೂರಿನ ಆರ್ ಟಿ ನಗರದ ಮಠದಹಳ್ಳಿಯ ಮನೆಯಲ್ಲಿ ಅವರು ನಿಧನರಾಗಿದ್ದಾರೆ. ಮಠದಹಳ್ಳಿಯ ಮನೆಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಶುಕ್ರವಾರ ಮಧ್ಯಾಹ್ನ 2 ಗಂಟೆ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ರಘು ಒಟ್ಟು 55 ಚಿತ್ರಗಳನ್ನು ನಿರ್ದೇಶಿಸಿದ್ದು, ಈ ಪೈಕಿ ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯದ ಬರೊಬ್ಬರಿ 27 ಚಿತ್ರಗಳನ್ನು ನಿರ್ದೇಶಿಸಿದ್ದರು. ಮಂಡ್ಯದ ಗಂಡು, ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಬೇಟೆಗಾರ, ಧರ್ಮ ಯುದ್ಧ, ನ್ಯಾಯ ನೀತಿ ಧರ್ಮ ಇನ್ನಿತರ ಸಿನಿಮಾಗಳನ್ನು ರಘು ನಿರ್ದೇಶಿಸಿದ್ದಾರೆ.
ರಜನೀಕಾಂತ್ ನಟನೆಯ ಬಾಲಿವುಡ್ ಚಿತ್ರ ಮೇರಿ ಅದಾಲತ್ ಸಿನಿಮಾಗೂ ನಿರ್ದೇಶನ ಮಾಡಿದ್ದರು. ಇವರ ನಿರ್ದೇಶನದ ಅವಳ ನೆರಳು, ಮಂಡ್ಯದ ಗಂಡು, ಕಾಡಿನ ರಾಜ , ಮೈಸೂರು ಜಾಣ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕಂಡಿದ್ದವು.
ಬರಹಗಾರ ಹಾಗೂ ಖ್ಯಾತ ನಿರ್ದೇಶಕರಾಗಿದ್ದ ಎ ಟಿ ರಘು , ಸಾಹಸ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿದ್ದರು. ರಘು ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Be the first to comment