ಕನ್ನಡ ಚಿತ್ರರಂಗದಲ್ಲಿ ಈಗ ದೊಡ್ಡ ದೊಡ್ಡ ಮಾತುಗಳು ಕೇಳಿಬರುತ್ತಿವೆ. ದೊಡ್ಡ ದೊಡ್ಡ ಸಿನಿಮಾಗಳು ಸಟ್ಟೇರಿವೆ. ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಆದರೆ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆ ಆಗುವ ಮಾತು ಮಾತ್ರ ಆಡುತ್ತಿಲ್ಲ. ಅದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಸರ್ಕಾರದ ನೀತಿಗಳು, ಜನರ ಕರೋನಾ ಭೀತಿಗಳೂ, ಬದಲಾಗಿರುವ ಲೈಫ್ ಸ್ಟೈಲ್ ರೀತಿಗಳೂ ಇವೆ. ಹಾಗಾಗಿ ಸದ್ಯದ ಸಮಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ರೂ ಬಿಡುಗಡೆ ಮಾಡೋಕೆ ಮಾತ್ರ ಪ್ಲ್ಯಾನ್ ಇಂಡಿಯಾ ಲೆವೆಲ್ಲಿಗೆ ಯೋಚನೆ ಮಾಡಬೇಕಿದೆ.
ಈ ಪರಿಸ್ಥಿತಿಯ ವಿಶೇಷ ಮತ್ತು ಅಚ್ಚರಿ ಅಂದ್ರೆ ಕನ್ನಡದ ಸ್ಟಾರ್ ಗಳು ಮಾತ್ರ ತಮ್ಮ ಚಿತ್ರ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆದರೆ ಪರಭಾಷಾ ಚಿತ್ರಗಳು ಕರೋನಾ ಭೀತಿಗೆ ಯಾವ ಮುಲಾಜೂ ನೋಡದೆ, ಧೈರ್ಯ ಮಾಡುವುದೇ ಈ ಭೀತಿಗೆ ಇಲಾಜು ಎಂದುಕೊಂಡು ತಮ್ಮ ಚಿತ್ರಗಳನ್ನು ತೆರೆಗೆ ತರುತ್ತಿದ್ದಾರೆ. ಅವುಗಳಲ್ಲಿ ಕೆಲವರು ಓಟಿಟಿಗಳಲ್ಲಿ ತಮ್ಮ ಚಿತ್ರ ಬಿಡುಗಡೆ ಮಾಡಿದರೆ, ಇನ್ನು ಕೆಲವರು ನೇರವಾಗಿ ಚಿತ್ರಮಂದಿರಕ್ಕೇ ಅಡಿ ಇಟ್ಟಿದ್ದಾರೆ.
ಕಳೆದ ವಾರ ಬಿಡುಗಡೆಯಾದ ತಮಿಳಿನ ಮಾಸ್ಟರ್ ಚಿತ್ರ ಇದಕ್ಕೆ ತಾಜಾ ಉದಾಹರಣೆ. ಇಲ್ಲಿ ಖುಷಿ ಮತ್ತು ಅಚ್ಚರಿ ಮೂಡಿಸುವ ವಿಷಯ ಅಂದ್ರೆ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಚಿತ್ರತಂಡ ಕೂಡ ಧೈರ್ಯ ಮಾಡಿದ್ದಕ್ಕೆ ತಕ್ಕ ಫಲಿತಾಂಶ ಸಿಕ್ಕಿದೆ ಎಂಬ ಖುಷಿಯಲ್ಲಿದೆ. ಬರೀ ಬೆಂಗಳೂರಿನಲ್ಲೇ ಸುಮಾರು 608 ಪ್ರದರ್ಶನ ಕಂಡಿದೆ ಮಾಸ್ಟರ್ ಚಿತ್ರ. ಅಲ್ಲದೆ ಎಲ್ಲಾ ಶೋಗಳೂ ಹೌಸ್ ಫುಲ್ ಆಗಿರೋದು ತಂಡದ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗಿದೆ ಎನ್ನುವುದಕ್ಕೆ ಉದಾಹರಣೆ.
ನಮ್ಮ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಗಳು, ಪವರ್ ಸ್ಟಾರ್ ಗಳು, ಅಭಿನಯ ಚಕ್ರವರ್ತಿ, ಕರುನಾಡ ಚಕ್ರವರ್ತಿಗಳು ತಮ್ಮ ಚಿತ್ರಗಳ ಬಿಡುಗಡೆಯ ದಿನಾಂಕಕ್ಕೆ ಇನ್ನೂ 3 ತಿಂಗಳ ಗಡುವು ಕೊಟ್ಟುಕೊಂಡಿದ್ದಾರೆ. ಅಷ್ಟೇ ಯಾಕೆ ಸೋ ಕಾಲ್ಡ್ ನ್ಯಾಷನಲ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಕೂಡ ಸದ್ಯಕ್ಕೆ ಬಿಡುಗಡೆ ಆಗುತ್ತಿಲ್ಲ. ಅದೇನೋ, ಇಲ್ಲಿನವರಿಗೆ ತಮ್ಮ ಚಿತ್ರವನ್ನು ಈಗ ಬಿಡುಗಡೆ ಮಾಡಿದರೆ ವಿಜಯ ಲಕ್ಷ್ಮಿಒಲಿಯುತ್ತಾಳೆ ಅನ್ನೋ ನಂಬಿಕೆ ಇಲ್ಲ ಅನ್ಸುತ್ತೆ. ಹಾಗಾಗಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರ ಮಾಸ್ಟರ್ ಈಗ ಬ್ಲಾಕ್ ಬಸ್ಟರ್ ಎನಿಸಿಕೊಳ್ಳುವ ಲಕ್ಷಣ ತೋರಿಸುತ್ತಿದೆ.
ಈ ಚಿತ್ರದ ನಿರ್ಮಾಪಕರು ತಮ್ಮ ಚಿತ್ರದಲ್ಲಿ ಇಬ್ಬಿಬ್ಬರು ವಿಜಯ್ ಗಳಿದ್ದಾರೆ ಎಂಬ ನಂಬಿಕೆಯಲ್ಲಿ ಬೆಂಗಳೂರಿನಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿ ಚಿತ್ರವನ್ನು ಬಿಡುಗಡೆ ಮಾಡಿ ವಿಜಯದ ನಗೆ ಬೀರಿದ್ದಾರೆ. ಹಾಗಾಗಿ ಕನ್ನಡ ಸಿನಿಮಾ ರಿಲೀಸ್ ಆಗ್ತಿಲ್ಲ ಅನ್ನೋ ವಾಸ್ತವದ ಮಧ್ಯೆ ಪರಭಾಷೆಯವರು ಇಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಮ್ಮ ಕನ್ನಡಿಗರೇ ಮುಗಿಬಿದ್ದು ಈ ಪರಭಾಷಾ ಚಿತ್ರಗಳನ್ನು ನೋಡುತ್ತಿದ್ದಾರೆ. ಸೋ ಬೇರೆ ಭಾಷೆ ಸಿನಿಮಾಗಳು ಕರ್ನಾಟಕದಲ್ಲಿ ದರ್ಬಾರ್ ಮಾಡುತ್ತಿವೆ. ಕನಿಷ್ಟ ಪಕ್ಷ ಇದನ್ನು ನೋಡಿಯಾದರೂ ಕನ್ನಡ ಚಿತ್ರರಂಗ ನಿದ್ದೆಯಿಂದ ಮೇಲೇಳುತ್ತದಾ ಎಂಬುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ, ನಿಮ್ಮ ಸೈಟ್ ಅನ್ನು ಜಾಸ್ತಿ ದಿನ ಖಾಲಿ ಬಿಟ್ರೆ, ಅಲ್ಲಿ ಬೇರೆ ಯಾರೋ ಬಂದು ಮನೆ ಕಟ್ಟಿಸಿಕೊಳ್ತಾರೆ ಎನ್ನುವ ಮಾತು ನಮ್ಮ ಚಿತ್ರರಂಗದ ಮಂದಿಗೆ ಅರ್ಥವಾಗಿರಬೇಕು.
ಈಗಲಾದರೂ ಕನ್ನಡದ ನಿರ್ಮಾಪಕರು ಮತ್ತು ಸ್ಟಾರ್ ಗಳು ಒಟ್ಟಿಗೆ ಕೂತು ಮಾತನಾಡಿ ಮತ್ತೆ ಕನ್ನಡ ಚಿತ್ರಗಳು ಚಿತ್ರಮಂದಿರಗಳಲ್ಲಿ ಮಾತನಾಡುವಂತೆ ಮಾಡಬೇಕಿದೆ ಎಂಬ ಅನಿವಾರ್ಯತೆಯ ಬಗ್ಗೆ ಮಾತ್ರ ಎರಡು ಮಾತಿಲ್ಲ.
-ಹರಿ ಪರಾಕ್
Be the first to comment