ಯುವ ಪಡೆಗಳು ಸೇರಿಕೊಂಡು ಸಿದ್ಧಪಡಿಸುತ್ತಿರುವ ಚಿತ್ರದ ಶೀರ್ಷಿಕೆ ಹಾಗೂ ಟೀಸರ್ ಅನಾವರಣ ಕಾರ್ಯಕ್ರಮ ಕಲಾವಿದರ ಭವನದಲ್ಲಿ ಅದ್ದೂರಿಯಾಗಿ ಬಿಡುಗಡೆ ಗೊಂಡಿತು. ಈ ಹಿಂದೆ ರಣಹೇಡಿ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಮನು ಕೆ.ಶೆಟ್ಟಿ ಹಳ್ಳಿ ಅವರು ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ.
ಆ ಚಿತ್ರದ ಹೆಸರು ಕುರ್ಚಿ. ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ 4 ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಟೈಟಲ್ ಹಾಗೂ ಟೀಸರ್‌ನ್ನು ಇತ್ತೀಚೆಗೆ ಹಿರಿಯನಟ ದೊಡ್ಡಣ್ಣ ಅವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ, ದಿಲೀಪ್, ದಿನೇಶ್ ಮಂಗ್ಳೂರು, ನಾಗೇಂದ್ರ ಅರಸ್ ಕೂಡ ಭಾಗವಹಿಸಿದ್ದರು. ಸಿನಿಮಾ ಮೇಲಿನ ಪ್ರೀತಿಯಿಂದ ಅನಿಲ್ ವೈ. ಕುಮಾರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಮೊದಲಿಗೆ ಮಾತನಾಡಿದ ನಿರ್ದೇಶಕ ಮನು ಇದು ನನ್ನ 2ನೇ ಚಿತ್ರ. ನನ್ನ ಮೇಲಿನ ವಿಶ್ವಾಸದಿಂದ ಎಲ್ಲರೂ ಬಂದು ಹರಸಿದ್ದಾರೆ. ಕುರ್ಚಿ ಎನ್ನುವುದು ಎಲ್ಲರಿಗೂ ಬೇಕು, ಅದಕ್ಕಾಗಿ ಏನೆಲ್ಲಾ ನಡೆಯಬಹುದು ಎನ್ನುವುದೇ ಈ ಚಿತ್ರ. ಟೀಸರ್ನಲ್ಲಿ ಬರುವ 3 ಡೈಲಾಗ್‌ಗಳಲ್ಲಿ ಇಡೀ ಚಿತ್ರದ ಕಂಟೆಂಟ್ ಹೇಳಿದ್ದೇನೆ.
ಇಲ್ಲಿ ಪ್ರತಿಯೊಬ್ಬರೂ ತನಗೇನೋ ಬೇಕು ಅಂತ ಓಡಾಡ್ತಿರ‍್ತಾರೆ, ಬೆಂಗಳೂರು, ಚೆನ್ನೈ, ಬಾಂಬೆ, ಅರಸೀಕೆರೆ ಸೇರಿದಂತೆ ಒಂದಷ್ಟು ಲೊಕೇಶನ್‌ಗಳಲ್ಲಿ 80 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆಯಿದೆ. ಎಲ್ಲಾ ಭಾಷೆಗಳಿಗೂ ಬೇರೆ ಬೇರೆಯಾಗೇ ಚಿತ್ರೀಕರಿಸುತ್ತೇವೆ. ಚಿತ್ರದಲ್ಲಿ ಹಾಡುಗಳಿಲ್ಲ, ಆದರೆ ಕೆಲ ಬಿಟ್‌ಗಳಿವೆ, ಇನ್ನು ಈ ಚಿತ್ರದಲ್ಲಿ ಸಬ್ಜೆಕ್ಟೇ ಹೀರೋ, ರಾಜಕೀಯ, ಪೋಲೀಸ್, ಹಾಗೂ ಸಿಸ್ಟಂ ಮೇಲೆ ನಡೆಯುವ ಕಥೆಯಿದು.
ಭೂಗತಲೋಕದ ಟಚ್ ಕೂಡ ಚಿತ್ರಕ್ಕಿದೆ. ಅಚ್ಯುತ್‌ಕುಮಾರ್, ದೊಡ್ಡಣ್ಣ, ನಾಗೇಂದ್ರ ಅರಸ್, ದಿನೇಶ್ ಮಂಗ್ಳೂರು, ದಿಲೀಪ್, ಸತೀಶ್ ಇವರೆಲ್ಲ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾರ್ಚ್ ಮೊದಲನೇ ವಾರದಿಂದ ಶೂಟಿಂಗ್ ಪ್ರಾರಂಭಿಸುವ ಪ್ಲಾನ್ ಇದೆ ಎಂದು ಹೇಳಿದರು.
ನಟ ದೊಡ್ಡಣ್ಣ ಮಾತನಾಡುತ್ತ ಮನುಷ್ಯ ಎಷ್ಟು ನಿಗರ್ವಿಯಾಗಿರ‍್ತಾನೋ ಅಷ್ಟು ಮೇಲಕ್ಕೆ ಬೆಳೀತಾನೆ. ನೆರಳನ್ನು ಹಿಂಬಾಲಿಸಬೇಡಿ, ಅದೇ ನಿಮ್ಮನ್ನು ಹಿಂಬಾಲಿಸುವಂತೆ ಆಗಿ ಎಂದು ಚಿತ್ರತಂಡಕ್ಕೆ ಕಿವಿಮಾತು ಹೇಳಿದರು. ನಂತರ ನಟ ದಿನೇಶ್ ಮಂಗ್ಳೂರು ಮಾತನಾಡಿ ಎಲ್ಲರೂ ಮಾಡುವುದು ಕುರ್ಚಿಗಾಗಿ, ಕಾಸಿಗಾಗಿ ಎಂದು ಈ ಚಿತ್ರ ಹೇಳುತ್ತದೆ.
ಮನು ನನಗೆ ಡೇಸ್ ಆಫ್ ಬೋರಾಪುರ ಚಿತ್ರದ ಸಮಯದಲ್ಲೇ ಪರಿಚಯ, ತುಂಬಾ ಬುದ್ದಿವಂತ ಎಂದರು. ನಂತರ ಚಂದ್ರಶೇಖರ ಬಂಡಿಯಪ್ಪ ಮಾತನಾಡಿ ನಾನು ರಥಾವರ, ತಾರಕಾಸುರ ಮಾಡುವಾಗ ಮನು ನನ್ನ ಜೊತೆಗಿದ್ದರು. 4 ಭಾಷೆಗಳಲ್ಲಿ ಚಿತ್ರನಿರ್ಮಾಣ ಮಾಡ್ತಿರುವುದು ಅದ್ಭುತ ಐಡಿಯಾ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಅನಿಲ್ ವೈ.ಕುಮಾರ್ ಚಿತ್ರ ದ ಸಂಕಲನಕಾರನೂ ಹೌದು. ಇದು ನನ್ನ 2ನೇ ಚಿತ್ರ, ಈ ಟೈಟಲ್ ಕೇಳಿ ಸುಮಾರು 25 ಜನ ಇನ್‌ವೆಸ್ಟ್ ಮಾಡಲು ಮುಂದೆ ಬಂದಿದ್ದಾರೆ ಎಂದು ಹೇಳಿಕೊಂಡರು, ನಾಗೇಂದ್ರ ಅರಸ್ ಮಾತನಾಡಿ ನಿರ್ಮಾಪಕರೇ ಸಂಕಲನಕಾರರೂ ಆಗಿರುವುದರಿಂದ ಚಿತ್ರದಲ್ಲಿ ನನಗೆ ಅಭಿನಯಿಸುವ ಕೆಲಸ ಕೊಟ್ಟಿದ್ದಾರೆ ಎಂದರು. ಚಿತ್ರಕ್ಕೆ ಶ್ರೀಧರ್ ಕಷ್ಯಪ್ ಅವರ ಸಂಗೀತ ಸಂಯೋಜನೆ ಇದೆ.
Be the first to comment