ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊನ್ನೆ ಲೈವ್ ಬಂದು ತಮ್ಮ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಆದರೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಇನ್ ಡೈರೆಕ್ಟ್ ಆಗಿ ಮೋದಿಜಿ ಅಭಿಮಾನಿಗಳಿಗೆ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಹಾಗಂತ ಅವರು ನೇರವಾಗಿ ಮೋದಿ ಅವರ ಬಗ್ಗೆ ಮಾತನಾಡಿಲ್ಲ. ಪ್ರಸ್ತುತ 5ಜಿ ಬೆಳವಣಿಗೆ ಬಗ್ಗೆ ಮಾತನಾಡುತ್ತಾ ಅಂಬಾನಿ ಆಡುವ ಮಾತುಮಾತಿಗೂ ಜೀ ಹುಜೂರ್ ಎನ್ನುವ ಮೋದಿ ಜಿ ಅವರ ವರ್ತನೆ ಬಗ್ಗೆ ಕಿಡಿ ಕಾರಿದ್ದಾರೆ ದರ್ಶನ್.
ಹೌದು, ಈ ವರ್ಷ ತಾವು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ, ಹಾಗಾಗಿ ಅಭಿಮಾನಿಗಳು ಮನೆ ಹತ್ತಿರ ಬರಬೇಡಿ ಎಂದು ಹೇಳಲು ಲೈವ್ ಬಂದಿದ್ದ ಅವರು ಅದೇ ವಿಡಿಯೋದಲ್ಲಿ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳಲ್ಲಿ ಇದೂ ಒಂದು.
ಅಂಬಾನಿ ಇತ್ತೀಚೆಗೆ 5ಜಿ ಪ್ರಕ್ರಿಯೆ ಶುರು ಮಾಡಿದ್ದು ದರ್ಶನ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಇವರು 5ಜಿ ಶುರು ಮಾಡಿರೋದೇ ಜನರನ್ನು ಮನೆಯಲ್ಲೇ ಮೊಬೈಲ್ ಗೆ ಅಂಟಿಕೊಂಡು ಕೂರೋದಕ್ಕೆ ಎಂದು ಆಪಾದಿಸಿರುವ ದರ್ಶನ್, ಇದರಿಂದಾಗಿ ಓಟಿಟಿಗಳಲ್ಲಿ ಸಿನಿಮಾ ನೋಡೋರ ಸಂಖ್ಯೆ ಹೆಚ್ಚಾಗುತ್ತೆ. ಅದೇ ಇವರ ಪ್ಲ್ಯಾನ್, ತಮ್ಮ ಮಾತು ಕೇಳುವ ದೊಡ್ಡವರನ್ನು ಜೊತೆಗಿಟ್ಟುಕೊಂಡು ಸಿನಿಮಾ ಇಂಡಸ್ಟ್ರಿಗೆ ಹೊಡೆತ ಕೊಡಲು ಅಂಬಾನಿ ಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಇದಕ್ಕೆಲ್ಲಾ ನಾವು ಮಣಿಯೋದಿಲ್ಲ, ಥಿಯೇಟರ್ ಗಳಲ್ಲಿ 50 ಪರ್ಸೆಂಟ್ ಅಲ್ಲ, ಕಾಲು ಪರ್ಸೆಂಟ್ ಆಕ್ಯುಪೆನ್ಸಿ ಅಂದರೂ ನಾವು ನಮ್ಮ ಸಿನಿಮಾವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಓಟಿಟಿಯಲ್ಲಿ ಬಿಡುಗಡೆ ಮಾಡಲ್ಲ ಎಂದು ಗುಡುಗಿದ್ದಾರೆ ದರ್ಶನ್.
ಅವರ ಈ ಮಾತು ಸತ್ಯವೇ. ಸದ್ಯಕ್ಕೆ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಎಲ್ಲರೂ ಹಿಂದೇಟು ಹಾಕುವಂಥ ಪರಿಸ್ಥಿತಿ ಇದೆ. ಇದನ್ನೇ ಬಂಡವಾಳವಾಗಿಸಿಕೊಂಡು ಅಂಬಾನಿ ಮೊಬೈಲ್ ಗಳಲ್ಲಿ 5ಜಿ ಸಂಪರ್ಕ ಕೊಟ್ಟು ಜನಗಳಿಗೆ ಥಿಯೇಟರ್ ಗಳ ಜೊತೆಗಿರುವ ಸಂಪರ್ಕ ಹಾಳು ಮಾಡಲು ಪ್ರಯತ್ನ ಪಡ್ತಾ ಇದ್ದಾರೆ ಎಂಬ ಧಾಟಿಯಲ್ಲಿ ದರ್ಶನ್ ಮಾತನಾಡಿದ್ದಾರೆ. ಇದಕ್ಕೆ ದೊಡ್ಡವರ ಕುಮ್ಮಕ್ಕು ಇದೆ ಎಂದು ಮೋದಿಯವರನ್ನು ಟಾರ್ಗೆಟ್ ಮಾಡಿದ್ದಾರೆ ದರ್ಶನ್.
ಅವರು ಹೇಳಿರುವುದು ಪ್ರತಿಶತ ಸತ್ಯ ಇದ್ದರೂ, ಮೋದಿಯನ್ನು ವಿರೋಧಿಸುವ ಪ್ರತಿ ವ್ಯಕ್ತಿಯ ಮಾತಲ್ಲೂ ಕೊಂಕು ಹುಡುಕಿ ಅವರನ್ನು ಹೀಗಳೆಯುವ ಶತ ಪ್ರಯತ್ನ ಮಾಡುವ ಮೋದಿ ಮತ್ತು ಬಿಜೆಪಿ ಅಭಿಮಾನಿಗಳು ಈಗ ದರ್ಶನ್ ಬಗ್ಗೆ ಗರಂ ಆಗಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗಲೇ ಅಂಬಾನಿ ಬಗ್ಗೆ ಮಾತನಾಡಿದ ದರ್ಶನ್ ಅವರ ಬಗ್ಗೆ ಕೊಂಕು ಮಾತುಗಳು ಶುರುವಾಗಿವೆ. ಅಂಬಾನಿಯೇ ನಮ್ಮ ದೇಶದ ಪ್ರಧಾನಿ ಅನ್ನೋ ಥರ ಕೆಲವು ಮಂದಿ ಈಗಾಗಲೇ ದರ್ಶನ್ ಅವರ ತೋಜೋವಧೆ ಮಾಡಲು ಕಾಂಟ್ರಾಕ್ಟ್ ತೆಗೆದುಕೊಂಡಿದ್ದಾರೆ. ಎಂದನಂತೆ ಹೇಡಿಗಳ ಧಾಟಿಯಲ್ಲಿ ದರ್ಶನ್ ಮನೆಯ ಮೇಲೆ ಐಟಿ ರೈಡ್ ಆಗಬೇಕು ಎಂದು ತಮ್ಮ ಭಂಡತನ ಪ್ರದರ್ಶಿಸಿದ್ದಾರೆ. ಅದರ ಜೊತೆಗೆ ಈ ಅವಕಾಶವಾದಿಗಳಿಗೆ ಈಗ ದರ್ಶನ್ ಅವರ ಮನೆಯ ಮೇಲೂ ಮತ್ತೆ ಕಣ್ಣು ಬಿದ್ದಿದೆ. ದರ್ಶನ್ ಅವರ ಮಾತಿಗೂ ಅವರು ಕಟ್ಟಿರುವ ಮನೆಗೂ ಸೇತುವೆ ಕಟ್ಟಲು ಯತ್ನಿಸುತ್ತಿರುವ ಈ ಜನ ಈಗ ರಾಜಾ ಕಾಲುವೆಯ ಮೇಲಿರುವ ದರ್ಶನ್ ಮನೆಯ ಬಗ್ಗೆ ಮತ್ತೆ ಹೊಸ ರಾಗ ತೆಗೆಯುತ್ತಿದ್ದಾರೆ. ಅದು ಅನಧಿಕೃತ ಅಂತ ಇವರಿಗೆ ಮತ್ತೆ ಜ್ಞಾನೋದಯ ಆಗಿದೆ. ಹಾಗಾಗಿ ಅಧಿಕಾರದ ಅಸ್ತ್ರ ಇಟ್ಟುಕೊಂಡು ತಮ್ಮ ವಿರುದ್ಧ ಸಣ್ಣ ಮಾತಾಡುವವರನ್ನು ಹಣಿಯುವ ಇವರ ಸಣ್ಣತನ ಮತ್ತೊಮ್ಮೆ ಪ್ರದರ್ಶತವಾಗುತ್ತಿದೆ.
ದರ್ಶನ್ ಈ ಹಿಂದೆಯೇ ನನಗೇನೂ ಎರಡು ಕೋಡಿಲ್ಲ, ಎಲ್ಲರಿಗೂ ಅಪ್ಲೈ ಆಗುವ ನ್ಯಾಯ ನನಗೂ ಅಪ್ಲೈ ಆಗುತ್ತೆ. ಮನೆ ವಿಷಯದಲ್ಲಿ ಕಾನೂಬದ್ಧವಾಗಿ ಹೋರಾಡುತ್ತೇನೆ ಎಂದು ಹೇಳಿದ್ದರು. ಆದರೆ, ಅದೇನೇ ಇರಲಿ, ದರ್ಶನ್ ಒಂದು ಸತ್ಯ ಹೇಳಿದ್ದಕ್ಕೆ ಈ ಪರಿ ಅವರ ವಿರುದ್ಧ ಮಾತನಾಡುವ ಸಂಪ್ರದಾಯ ಸರಿಯಲ್ಲ. ಯಾಕಂದ್ರೆ ಇದು ಪ್ರಜಾಪ್ರಭುತ್ವ, ಇಲ್ಲಿ ಮನ್ ಕೀ ಬಾತ್ ಹೇಳಿಕೊಳ್ಳೋದು ಮೋದಿ ಅವರೊಬ್ಬರಿಗೇ ಇರುವ ಹಕ್ಕಲ್ಲ. ಆ ಹಕ್ಕು ದೇಶದ ಪ್ರತಿಯೊಬ್ಬರಿಗೂ ಇದೆ ಅನ್ನೋದನ್ನ ಕೆಲವು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಿದೆ.
-ಹರಿ ಪರಾಕ್
Be the first to comment