ಚಿತ್ರ ವಿಮರ್ಶೆ : ನಾನೊಂಥರ: ಒಂಥರಾ ಕಾಡುವ ಚಿತ್ರ

ನಾನೊಂಥರ: ಒಂಥರಾ ಕಾಡುವ ಚಿತ್ರ

ಚಿತ್ರ: ನಾನೊಂಥರ
ತಾರಾಗಣ: ತಾರಕ್, ರಕ್ಷಿಕಾ, ದೇವರಾಜ್
ನಿರ್ದೇಶನ: ಯು ರಮೇಶ್ ಕಗ್ಗಲು
ನಿರ್ಮಾಣ: ಡಾ. ಜಾಕ್ಲಿನ್ ಫ್ರಾನ್ಸಿಸ್

ಬಿಸಿನಿಮಾಸ್ ರೇಟಿಂಗ್ 4/5

ಕುಡುಕನೊಬ್ಬ ಸಮಾಜವನ್ನು ತಿದ್ದಬಹುದಾ? ಖಂಡಿತವಾಗಿ `ಅಸಾಧ್ಯ’ ಎನ್ನುವುದೇ ನಿಮ್ಮ ಉತ್ತರವಾಗಿರುತ್ತದೆ. ಆದರೆ ಅದನ್ನೇ ಸಾಧ್ಯವಾಗಿಸಿ ತೋರಿಸಿದೆ `ನಾನೊಂಥರ’ ಚಿತ್ರತಂಡ. ಆ ಕಾರಣದಿಂದಲೇ ನಾನೊಂಥರ ಒಂಥರಾ ಚೆನ್ನಾಗಿದೆ ಎಂದು ಅನಿಸದೇ ಇರದು.

ಶಂಕರಪ್ಪನಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡವನು ತಾರಕ್, ಚಿಕ್ಕವನು ವಿಜಿ. ಶಂಕರಪ್ಪನಿಗೆ ಮಗನೆಂದರೆ ಮುದ್ದು. ಹಾಗಾಗಿಯೇ ಮಗ ಕುಡಿದು ಹಾಳಾಗುತ್ತಿರುವುದು ಗೊತ್ತಿದ್ದರೂ ಹೊಡೆದು ಬಡಿದು ಸರಿ ಮಾಡುವುದಿಲ್ಲ. ಮಗ ಮೆಚ್ಚುವ ಸೊಸೆಯೇ ಆತನನ್ನು ಸರಿದಾರಿಗೆ ತರಬಹುದೆನ್ನುವುದು ಆತನ ನಿರೀಕ್ಷೆ. ಇನ್ನು ತಾರಕ್ ತಮ್ಮ ಅಣ್ಣನಿಗೆ ಹೇಳಿದಂಥ ಸಹೋದರ! ಕುಡಿದು ಬಂದ ಅಣ್ಣನಿಗೆ ಕೈ ತುತ್ತು ನೀಡುವ ಪ್ರೀತಿ! ಇದರ ನಡುವೆ ತಾರಕ್‌ಗೂ ಒಂದು ಲವ್ವಾಗುತ್ತದೆ. ಆಕೆ ವೃತ್ತಿಯಲ್ಲಿ ವೈದ್ಯೆ. ಹೆಸರು ಪ್ರೇಮ. ಈತ ಕುಡುಕನಾದರೂ ಒಳ್ಳೆಯ ಮನಸಿನ ಹುಡುಗ ಎಂದು ಆಕೆಗೆ ಕಾಳಜಿ. ಅದು ಬಳಿಕ ಪ್ರೇಮವಾಗುತ್ತದೆ. ಆದರೆ ಇನ್ನೇನು ಜೋಡಿ ಸೇರಬೇಕು ಎನ್ನುವಾಗ ಆಕೆಗೊಂದು ಗೊಂದಲ. ಅದಕ್ಕೆ ಕಾರಣ ಆಕೆ ಕಣ್ಣಾರೆ ಕಂಡಂಥ ಒಂದು ದೃಶ್ಯ. ಅಂಥ ದೃಶ್ಯವೇನು? ಅಲ್ಲಿ ನಿಜಕ್ಕೂ ನಡೆದಿದ್ದೇನು ಎನ್ನುವುದೇ ಚಿತ್ರದ ಮೊದಲ ಟ್ವಿಸ್ಟ್. ಆದರೆ ನಿಜವಾದ ಕತೆ ಇರುವುದೇ ಚಿತ್ರದ ಮಧ್ಯಂತರದ ಬಳಿಕ. ಕುಡುಕನ ಪಾತ್ರವೊಂದನ್ನು ಕೇಂದ್ರವಾಗಿಸಿ ಇಷ್ಟೊಂದು ಭಾವನೆಗಳನ್ನು ಹೇಳಬಹುದು ಎನ್ನುವ ಧೈರ್ಯ ಮಾಡಿದ ನಿರ್ದೇಶಕರಿಗೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು.

ನಾಯಕ ತಾರಕ್‌ಗೆ ಇದು ನಾಯಕನಾಗಿ ಮೊದಲ ಚಿತ್ರ. ಪ್ರಥಮ ಚಿತ್ರದಲ್ಲೇ ತಾನು ಯಾವ ನಾಯಕರಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅದು ನೋಡುವುದಕ್ಕಷ್ಟೇ ಅಲ್ಲ; ಡೈಲಾಗ್ ಡೆಲಿವರಿ ಇರಲಿ, ಡಾನ್ಸ್ ಇರಲಿ, ಫೈಟ್ ಇರಲಿ ಎಲ್ಲದರಲ್ಲಿಯೂ ತಾನು ಒಬ್ಬ ಸಮರ್ಥನೆಂದು ಸಾಬೀತು ಪಡಿಸಿದ್ದಾರೆ. ಅದಕ್ಕೆ ತಕ್ಕಂತೆ ಹೀರೋಯಿಸಮ್ ತುಂಬಿಸುವಂಥ ಸಂಭಾಷಣೆಗಳು ಚಿತ್ರದ ಮತ್ತೊಂದು ಹೈಲೈಟ್ ಎಂದು ಹೇಳಬಹುದು. ನಾಯಕಿಯಾಗಿ ರಕ್ಷಿಕಾಗೆ ಅಂಥ ವಿಶೇಷ ಅವಕಾಶಗಳೇನೂ ಇಲ್ಲ. ಆದರೆ ಸಿಕ್ಕ ಪಾತ್ರದಲ್ಲಿ ಭಾವ ತುಂಬಿ ಅಭಿನಯಿಸುವಲ್ಲಿ ಅವರು ಕೂಡ ಗೆದ್ದಿದ್ದಾರೆ. ಉಳಿದಂತೆ ನಾಯಕ ತಂದೆಯಾಗಿ ದೇವರಾಜ್, ಬಾರ್ ಸ್ನೇಹಿತರಾಗಿ ರಾಕ್ಲೈನ್ ಸುಧಾಕರ್ ತಮ್ಮ ಎಂದಿನ ಚಾರ್ಮಿಂಗ್ ಉಳಿಸಿಕೊಂಡಿದ್ದಾರೆ. ತಾರಕ್ ತಮ್ಮ ವಿಜಿಯ ಪಾತ್ರದಲ್ಲಿ ನವನಟ ಜೈಸನ್ ಭರವಸೆಯ ಅಭಿನಯ ನೀಡಿದ್ದಾರೆ. ಚರ್ಚ್ ನಲ್ಲಿ ಕಾಣಿಸಿಕೊಳ್ಳುವ ಮದರ್ ಪಾತ್ರದಲ್ಲಿ ಜಾಕ್ಲಿನ್ ಫ್ರಾನ್ಸಿಸ್ ನಟಿಸಿದ್ದಾರೆ. ಒಂದೆರಡು ದೃಶ್ಯಗಳಲ್ಲಿ ಬರುವ ಪಾತ್ರವಾದರೂ ಕಲಾವಿದೆಯಾಗಿ ಅವರು ನೀಡಿರುವ ಮುಖಭಾವ ಚಿತ್ರ ಮುಗಿದ ಮೇಲೆಯೂ ಮನದಲ್ಲಿ ಉಳಿಯುತ್ತದೆ.

ಚಿತ್ರದಲ್ಲಿ ಎಣ್ಣೆಯ ದೃಶ್ಯಗಳು ಅತಿಯಾಗಿದೆ ಆಪಾದನೆ ಮಾಡಬಹುದಾದರೂ ಅದಕ್ಕೆ ಸರಿಯಾದ ಕಾರಣವನ್ನು ಚಿತ್ರದ ಫ್ಲ್ಯಾಶ್‌ಬ್ಯಾಕ್ ಸನ್ನಿವೇಶಗಳು ತಿಳಿಸಿಕೊಡುತ್ತವೆ. ಮಾತ್ರವಲ್ಲ, ಕುಡುಕರಲ್ಲಿಯೂ ಇಷ್ಟೊಂದು ಮಾನವೀಯ ಗುಣಗಳು ಇದ್ದರೆ ಕುಡಿಯದವರು ಮರೆಯುತ್ತಿರುವ ಸಾಮಾಜಿಕ ಬಾಧ್ಯತೆಗಳೇನು ಎನ್ನುವುದನ್ನು ಸೂಚ್ಯವಾಗಿ ತೋರಿಸಲಾಗಿದೆ. ಟಪ್ಪಾಂಗುಚ್ಚಿ, ಪ್ಯಾತೋ, ಐಟಂ ಹಾಡುಗಳ ಮೂಲಕ ಸಿನಿಮಾದ ಸಂಗೀತ ಸಮ್ಮೋಹನಗೊಳಿಸುತ್ತದೆ. ಸೂರಿ ಎನ್ನುವ ಖಳನಾಗಿ ನಟಿಸಿದ ಪಾತ್ರಧಾರಿ ಮತ್ತು ಆತನೊಡನೆ ಇರುವ ಆಕ್ಷನ್ ದೃಶ್ಯಗಳು ಆಕರ್ಷಕ. ಕ್ಲೈಮಾಕ್ಸ್‌ನಲ್ಲಿರುವ ಟ್ವಿಸ್ಟ್‌ಗಳು ನಿಜಕ್ಕೂ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುವಂತಿದೆ. ನಾಯಕನ ಸಂಭಾಷಣೆ ಮಾತ್ರವಲ್ಲ, ಚಿತ್ರದ ಸಂದೇಶದ ಮೂಲಕವೂ ನಿರ್ದೇಶಕರು ಸಮಜದ ಬಗ್ಗೆ ತಮಗಿರುವ ಕಾಳಜಿಯನ್ನು ತೋರಿಸಿದ್ದಾರೆ. ಪ್ರತಿಯೊಬ್ಬನ ಬದುಕಲ್ಲಿ ತಾಯಿಯ ಪ್ರಭಾವ ಎಷ್ಟು ಇರುತ್ತದೆ ಎನ್ನುವುದನ್ನು ಮನದಟ್ಟು ಮಾಡುವ ಈ ಚಿತ್ರ ಖಂಡಿತವಾಗಿ ಒಮ್ಮೆ ನೋಡಲೇಬೇಕಾದಂಥ ಸಿನಿಮಾ.

Be the first to comment

Leave a Reply

Your email address will not be published. Required fields are marked *

Translate »
error: Content is protected !!