ಆಡಿಯೋ ಬಿಡುಗಡೆಗೆ ಮಾಡಿಕೊಂಡ ‘ಖೇಲ್’ ಚಿತ್ರತಂಡ

ಹೊಸಬರ ಹೊಸಸಾಹಸಕ್ಕೆ ಮುರಳಿ ಮೋಹನ್, ನಿರ್ದೇಶಕ ಶಿವಗಣೇಶ್ ಸಾಥ್
ಶೀಘ್ರದಲ್ಲಿ ಚಿತ್ರಮಂದಿರಕ್ಕೆ ಆಗಮಿಸುವ ಸುಳಿವು
ಸಿನಿಮಾ ಹೆಸರು ಖೇಲ್. ಶೀರ್ಷಿಕೆಗೆ ಸೂಕ್ತ ಎನಿಸುವಂತೆ ಇಲ್ಲಿ ಆಟವೇ ಪ್ರಧಾನ. ಹಾಗಂತ ಆ ಆಟ ಯಾವುದು? ಕಳ್ಳ ಯಾರು ಹೀರೋ ಯಾರು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎಂದು ಕುತೂಹಲಕ್ಕೆ ಒಗ್ಗರಣೆ ಹಾಕಿತು ಚಿತ್ರತಂಡ. ಅಂದಹಾಗೆ, ಯೋಗಿತ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ಸತೀಶ್​ ಎಚ್​ (ಮಾರ್ಕೇಟ್​) ನಿರ್ಮಾಣ ಮಾಡಿರುವ ಖೇಲ್​ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಾಡನ್ನು ಬಿಡುಗಡೆ ಮಾಡಿಕೊಂಡ ತಂಡ, ಬಿಡುಗಡೆಗೆ ನಾವು ಸಿದ್ಧರಿದ್ದೇವೆ ಎಂಬ ಮುನ್ಸೂಚನೆಯನ್ನು ನೀಡಿದೆ. ಈಗಾಗಲೇ ಸೆನ್ಸಾರ್ ಸಹ ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಚಿತ್ರದ ಮೊದಲ ಪತ್ರಿಕಾಗೋಷ್ಠಿ ಆಗಿದ್ದರಿಂದ ಮೈಕ್​ ಕೈಗೆತ್ತಿಕೊಂಡ ನಿರ್ದೇಶಕ ರಾಜೀವ್ ನಾಯಕ್, ತಂಡದ ಎಲ್ಲರಿಗೂ ಧನ್ಯವಾದ ಅರ್ಪಿಸಿ ಮಾತು ಶುರುಮಾಡಿದರು. ‘ನಟನಾಗಿ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಲೆಕ್ಕಾಚಾರ ಎಂಬ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದೆ. ಸತೀಶ್ ಅವರ ಪರಿಚಯವಾಯ್ತು. ಅಲ್ಲಿಂದ ಖೇಲ್ ಸಿನಿಮಾದ ಕನಸು ನಡೆಯುತ್ತ ಬಂದಿದೆ. ಒಟ್ಟು 45 ದಿನಗಳಲ್ಲಿ ಈ ಸಿನಿಮಾ ಶೂಟಿಂಗ್ ಮಾಡಿದ್ದೇವೆ. ಬಹುತೇಕ ಶೂಟಿಂಗ್ ಚಿಂತಾಮಣಿಯಲ್ಲಿ ನಡೆದಿದೆ ಎಂದು ನಿರ್ದೇಶಕ ರಾಜೀವ್ ನಾಯಕ್ ಮಾಹಿತಿ ನೀಡಿದರು.

ವೇದಿಕೆ ಮೇಲೆ ಕೊಂಚ ಭಾವುಕರಾಗಿಯೇ ಮಾತನಾಡಿದ ನಿರ್ಮಾಪಕ ಸತೀಶ್, ತುಂಬ ಕಷ್ಟ ಪಟ್ಟು ಈ ಸಿನಿಮಾ ಮಾಡಿದ್ದೇವೆ. ಕೂಲಿ ಕೆಲಸ ಮಾಡುತ್ತ ಇದೀಗ ಸಿನಿಮಾ ನಿರ್ಮಾಣ ಮಾಡುವ ಮಟ್ಟಿಗೆ ಬೆಳೆದಿದ್ದೇವೆ. ಸಿನಿಮಾ ನಿರ್ಮಾಣ ಮಾಡಬೇಕೆಂಬ ಕನಸಿತ್ತು. ಇದೀಗ ಅದು ನೆರವೇರಿದೆ. ಇಡೀ ಕರ್ನಾಟಕ ಆಶೀರ್ವಾದ ಮಾಡಿ ಹರಸಲಿ ಎಂದರು.
ಇನ್ನು ಆಡಿಯೋ ಬಿಡುಗಡೆ ಕಾರ್ಯಕ್ರಮ ಆಗಿದ್ದರಿಂದ ಗಣೇಶ್ ಭಾಗವತ್ ಸಹ ಒಂದಷ್ಟು ಅನಿಸಿಕೆ ಹಂಚಿಕೊಂಡರು. ಚಿತ್ರದಲ್ಲಿ ಮೊದಲಿಗೆ ಎರಡೇ ಹಾಡುಗಳಿದ್ದವು, ಅದಾದ ಬಳಿಕ ಇನ್ನೊಂದುಟ ಟ್ಯೂನ್ ರೆಡಿ ಮಾಡಿದೆ. ಹೇಗೋ ಅದಕ್ಕೂ ಚಿತ್ರದಲ್ಲಿ ನಿರ್ದೇಶಕರು ಸ್ಥಳಾವಕಾಶ ಮಾಡಿಕೊಟ್ಟಿದ್ದಾರೆ. ಐಟಂ ಹಾಡು, ರೊಮ್ಯಾಂಟಿಕ್ ಹಾಡೂ ಸಿನಿಮಾದಲ್ಲಿವೆ ಎಂದರು ಗಣೇಶ್.

ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಮುರಳಿ ಮೋಹನ್, ಹೊಸಬರ ಸಿನಿಮಾಗಳೇ ಹೊಸ ಹೊಸ ಇತಿಹಾಸ ಸೃಷ್ಟಿಸುತ್ತವೆ. ತಂಡ ನೋಡಿದರೆ ಪ್ರೇರಣಾದಾಯಕವಾಗಿದೆ. ಅದರಲ್ಲೂ ನಮ್ಮ ಭಾಷೆಗೂ ಹೊಸ ಹೊಸ ನಾಯಕರು ಬೇಕಾಗಿದ್ದಾರೆ. ತಯಾರಾಗಿ ಬನ್ನಿ. ಕರ್ನಾಟಕದಲ್ಲಿ ನಿಮ್ಮ ಆಟ ಶುರುವಾಗಲಿ. ಒಳ್ಳೊಳ್ಳೆ ಆಟಗಾರರು ನಿಮ್ಮ ತಂಡದಿಂದ ಬರಲಿ ಎಂದರು.

ಅದೇ ರೀತಿ ನಿರ್ದೇಶಕ ಶಿವಗಣೇಶ್ ಸಹ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸಬರಿಗೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂದರು.
ಚಿತ್ರದ ನಾಯಕ ಅರವಿಂದ್ ಸಹ ಪಾತ್ರದ ಬಗ್ಗೆ ಹೇಳಿಕೊಂಡರು. ಇದು ನನ್ನ ಮೊದಲ ಸಿನಿಮಾ. ವಿಶೇಷವಾದ ಪಾತ್ರದ ಮೂಲಕ ಆಗಮಿಸುತ್ತಿದ್ದೇನೆ. ಒಬ್ಬ ಕಳ್ಳನಾಗಿದ್ದೇನೆ. ಆತ ಕಳ್ಳನಾಗಲು ಕಾರಣ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎಂದರು ಅರವಿಂದ್.

ಚಿತ್ರದ ನಾಯಕಿ ಹಿಮಾ ಮೋಹನ್ ಈಗಾಗಲೇ ಆರು ಸಿನಿಮಾ ಮಾಡಿದ್ದಾರೆ. ಅವುಗಳಲ್ಲಿ ಬಿಡುಗಡೆಯಾಗಲಿರುವ ಎರಡನೇ ಚಿತ್ರವಿದು. ಎರಡು ಶೇಡ್ಗಳಲ್ಲಿ ಹಿಮಾ ಕಾಣಿಸಿಕೊಂಡಿದ್ದು, ರಿಲೀಸ್ ಗೆ ಕಾಯುತ್ತಿದ್ದಾರೆ.

ಇನ್ನು ‘ಐರಾವತ’, ‘ಹೊಂಬಣ್ಣ’,‘ಚಿ ತು ಸಂಘ’, ‘ಡೇಂಜರ್​ ಝೋನ್’ ಸೇರಿ 60ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಪೃಥ್ವಿ ಯಾದವ್ ಈ ಚಿತ್ರದಲ್ಲಿ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ.

‘ಖೇಲ್​’ ಚಿತ್ರವನ್ನು ಚಿಂತಾಮಣಿ, ಕೈವಾರ, ಕಗತಿ, ಕೋಲಾರ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಗಣೇಶ್ ಭಾಗವತ್ ಸಂಗೀತ, ದಿಲೀಪ್ ಪಿರಿಲಾ ಛಾಯಾಗ್ರಹಣ ಮಾಡಿರುವ ಈ ಚಿತ್ರದಲ್ಲಿ ಚಂದ್ರ ಯಾದವ್, ಗೌತಮ್ ರಾಜ್, ಪ್ರೆಸ್ ರವಿ, ಪವಿತ್ರ, ಸಂತೋಷ್, ರಾಜೇಶ್, ಮಹೇಶ್ ಮುಂತಾದವರು ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!