ಎರಡೂವರೆ ದಶಕಗಳ ಹಿಂದೆ ತೆರೆ ಕಂಡಿದ್ದ ತನಿಖೆ ಶೀರ್ಷಿಕೆಯಡಿ ನಿರ್ಮಾಣವಾಗಿರುವ ಮತ್ತೊಂದು ಚಿತ್ರ ಈವಾರ ೫೦ಕ್ಕೂ ಹೆಚ್ಚ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಜಿ.ಎಸ್. ಕಲಿಗೌಡ ಅವರು ಈ ಚಿತ್ರದ ನಿರ್ದೇಶನ, ನಿರ್ಮಾಣದ ಜೊತೆಗೆ ಸಾಹಿತ್ಯ ಕೂಡ ರಚಿಸಿದ್ದಾರೆ. ಕನಕಪುರದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಸತ್ಯ ಘಟನೆಯನ್ನು ಇಟ್ಟುಕೊಂಡು ತನಿಖೆ ಚಿತ್ರಕ್ಕೆ ಕಥಾಹಂದರ ಹೆಣೆದಿರುವ ಕಲಿಗೌಡರು ಹಳ್ಳಿಯ ಆರು ಜನ ಸ್ನೇಹಿತರು ಹಾಗೂ ಒಬ್ಬ ಯುವತಿಯ ನಡುವೆ ನಡೆಯುವ ಕಥೆ ಹೇಳಿದ್ದಾರೆ.
ಪ್ರೀತಿಯ ವಿಚಾರಕ್ಕೆ ಸ್ನೇಹಿತರಲ್ಲೇ ಮನಸ್ತಾಪ ಉಂಟಾಗುತ್ತದೆ. ಅದೇ ಸಮಯಕ್ಕೆ ಆ ಸ್ನೇಹಿತರಲ್ಲಿ ಒಬ್ಬನ ಕೊಲೆ ನಡೆದುಹೋಗುತ್ತದೆ. ಇದರಿಂದ ಉಳಿದ ಐವರು ಸ್ನೇಹಿತರು ಊರನ್ನೇ ಬಿಡುವಂತಾಗುತ್ತದೆ. ಆರಂಭದಿಂದಲೂ ಪ್ರೇಕ್ಷಕರ ಮನದಲ್ಲಿ ಮೂಡುವ ಎಲ್ಲಾ ಪ್ರಶ್ನೆಗಳಿಗೆ ಚಿತ್ರದ ಕ್ಲೈಮಾಕ್ಸ್ನಲ್ಲಿ ಉತ್ತರ ಸಿಗುತ್ತದೆ, ಈ ಚಿತ್ರದಲ್ಲಿ ನವೀನ್ ಸಜ್ಜು ಹಾಡಿರುವ ಎಣ್ಣಿ ಹೊಡಿಯೋದ, ಹೆಂಡ್ತಿ ಬಿಡೋದ ಎಂಬ ಮಾಸ್ ಹಾಡು ಲಾಕ್ ಡೌನ್ ಸಮಯದಲ್ಲಿ ಬಿಡುಗಡೆಯಾಗಿ ದೊಡ್ಡ
ಮಟ್ಟದಲ್ಲಿ ಹಿಟ್ ಆಗಿದೆ. ಆರ್.ಡಿ. ಅನಿಲ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಹೊಸ ಎಂಟ್ರಿ ಕೊಟ್ಟಿದ್ದಾರೆ. ಅವರು ಚಿತ್ರದ ನಿರ್ಮಾಪಕರೂ ಹೌದು, ಚಿತ್ರದ ನಾಯಕಿ ಚಂದನ ಅವರದು ಒಬ್ಬ ಹೈಸ್ಕೂಲ್ ಹುಡುಗಿಯ ಪಾತ್ರ. ಉಳಿದಂತೆ ಸಂತೋಷ್ ವಿಜಯಕುಮಾರ್, ಮಚ್ ಮುನಿರಾಜು, ಗುಲ್ಷನ್, ನಿಖಿತ್, ರವಿ, ಕಲ್ಕೆರೆ ಗಂಗಾಧರ್, ಗೋಪಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೈಸೂರು, ಪಾಂಡವಪುರ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕ್ರಿಸ್ಟೋಫರ್ ಲೀ ಅವರ ಸಂಗೀತದ ನಾಲ್ಕು ಹಾಡುಗಳಿಗೆ ಸಂತೋಷ್ ವೆಂಕಿ, ಚಿಂತನ್ ವಿಕಾಸ್, ನವೀನ್ ಸಜ್ಜು, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ. ಶ್ಯಾಮ್ ಸಿಂಧನೂರು ಚಿತ್ರದ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಮಚ್ಚು ಮುನಿರಾಜು, ಸಮೀವುಲ್ಲಾ, ಹರ್ಷಿತ ಚೆನ್ನು ಈ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
Be the first to comment