ಭಾರತದ ಪರಮಪವಿತ್ರ ಪುಣ್ಯಕ್ಷೇತ್ರ ಕಾಶಿ. ಇದನ್ನು ಬನಾರಸ್ ಅಂತಲೂ ಕರೆಯುತ್ತಾರೆ. ಈಗ ಬನಾರಸ್ ಹೆಸರಿನಲ್ಲಿ ಕನ್ನಡ ಚಿತ್ರ ನಿರ್ಮಾಣವಾಗಿದ್ದು, ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಇತ್ತೀಚೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು.
ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳ ನಿರ್ದೇಶನಕ್ಕೆ ಹೆಸಾರಾಗಿರುವ ಜಯತೀರ್ಥ ಬನಾರಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಜೈದ್ ಖಾನ್ ಈ ಚಿತ್ರದ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿ. ದೇವರಾಜ್, ಅಚ್ಯುತಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ಮುಂತಾದವರು ಬನಾರಸ್ ನ ತಾರಾಬಳಗದಲ್ಲಿದ್ದಾರೆ.
ಚಿತ್ರದ ಸುಮಧುರ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ರಶ್ಮಿ ವಸ್ತ್ರವಿನ್ಯಾಸ ಮಾಡಿದ್ದಾರೆ.
ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಮುಜಮ್ಲಿಲ್ ಅಹಮದ್ ಖಾನ್ ಅವರ ಸಹ ನಿರ್ಮಾಣವಿದೆ. ವಿಭಿನ್ನ ಪ್ರೇಮಕಥೆಯ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ನಡೆದಿದೆ. ಕಾಶಿಗೂ ಚಿತ್ರದ ಕಥೆಗೂ ಸಂಬಂಧವಿದೆ ಹಾಗಾಗಿ ಅಲ್ಲೇ ಹಿಚ್ಚಿನ ಚಿತ್ರೀಕರಣವಾಗಿದೆ.ಸಹಜ ಸೌಂದರ್ಯದ ಕಾಶಿಯ ಎಲ್ಲಾ ಘಾಟ್ ನಲ್ಲೂ ಬನಾರಸ್ ಚಿತ್ರದ ಚಿತ್ರೀಕರಣ ನಡೆದಿದೆ. ಉಳಿದಂತೆ ಬೆಂಗಳೂರು, ಮೈಸೂರು, ಗೋವಾದಲ್ಲೂ ಚಿತ್ರೀಕರಣವಾಗಿದೆ.ಇಲ್ಲಿಯವರೆಗೆ ಯಾವ ಕನ್ನಡ ಚಿತ್ರಗಳ ಚಿತ್ರೀಕರಣ ಸಹ ಕಾಶಿಯಲ್ಲಿ ಇಷ್ಟು ದಿನ ನಡಿದಿಲ್ಲ. ಬಹುಶಃ ಇದೇ ಮೊದಲು. ಕಾಶಿಯ ಪರಂಪರೆ, ಸಂಸ್ಕೃತಿ ಹಾಗೂ ಅಲ್ಲಿನ ಪಾತ್ರಗಳನ್ನು ಬನಾರಸ್ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು ಎಂದು ನಿರ್ದೇಶಕ ಜಯತೀರ್ಥ ತಿಳಿಸಿದ್ದಾರೆ.
Be the first to comment