ದಿ ಮೋಸ್ಟ್ ವೈಲೆಂಟ್ ಮ್ಯಾನ್… ಕಾಲ್ಡ್ ಒನ್ ಮ್ಯಾನ್… ದಿ ಮೋಸ್ಟ್ ವೈಲೆಂಟ್….. ಇದು ಸಲಾರ್ ಚಿತ್ರದ ಅಡಿಬರಹ. ಚಿತ್ರದ ಉಪಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಆ್ಯಕ್ಷನ್ ಬೇಸ್ಡ್ ಸಿನಿಮಾ ಎಂದು ತಿಳಿಯುತ್ತದೆ. ಸಲಾರ್ ಚಿತ್ರದ ಟೈಟಲ್ಲೇ ಡಿಫರೆಂಟ್ ಆಗಿದ್ದರೆ, ಈ ಚಿತ್ರದ ಕಾಂಬಿನೇಷನ್ ಮತ್ತಷ್ಟು ರೋಚಕತೆ ಮೂಡಿಸುವಂತಿದೆ. ಆದಿಪುರಷ್ ಎಂಬ ವಲ್ರ್ಡ್ ವೈಲ್ಡ್ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಭಾಸ್ ಸಲಾರ್ ಚಿತ್ರದ ನಾಯಕನಾಗಿದ್ದರೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್.
ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ರ ಕಾಂಬಿನೇಷನ್ ಪೋಸ್ಟರ್ ಬಿಡುಗಡೆಯಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.ಜಗಾಂಭೀರ್ಯವಾಗಿ ಕುಳಿತಿರುವ ಪ್ರಭಾಸ್ ಕೈಯಲ್ಲಿ ತಲ್ವಾರ್ ಇರುವುದರಿಂದ ಇದು ಆ್ಯಕ್ಷನ್ ಚಿತ್ರವೆಂದು ಬಿಂಬಿಸಲಾಗಿದೆ. ಸ್ಯಾಂಡಲ್ವುಡ್ನಲ್ಲಿ ರಾಜಕುಮಾರ, ಕೆಜಿಎಫ್ ಅಂತಹ ಮಹೋನ್ನತ ಚಿತ್ರ ನಿರ್ಮಿಸಿರುವ ವಿಜಯ್ಕಿರಂಗದೂರ್ ಅವರ ಹೊಂಬಾಳೆ ಫಿಲಂಸ್ ಅಡಿ ಸಲಾರ್ ಚಿತ್ರ ನಿರ್ಮಾಣವಾಗುತ್ತಿದೆ.ಕಳೆದೆರಡು ದಿನಗಳಿಂದ ಒಂದು ದೊಡ್ಡ ಮಾಹಿತಿ ನೀಡುವುದಾಗಿ ಹೊಂಬಾಳೆ ಪ್ರೊಡಕ್ಷನ್ಸ್ನವರು ಪ್ರಕಟಿಸಿದ್ದರು ಅದರಂತೆ ಡಿಸೆಂಬರ್ 2 ರಂದು ಮಧ್ಯಾಹ್ನ 2 ಗಂಟೆಗೆ ಪ್ರಭಾಸ್ ನಟನೆಯ ಸಲಾರ್ ಚಿತ್ರ ನಿರ್ಮಿಸುವುದಾಗಿ ಘೋಷಿಸಿದ್ದಾರೆ.
ಸಲಾರ್ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿಸಲು ನಿರ್ಮಾಪಕ ವಿಜಯ್ಕಿರಂಗದೂರ್ ಅವರು ಹೊರಟಿದ್ದಾರೆ, ಆದರೆ ಎಷ್ಟು ಭಾಷೆಯಲ್ಲಿ ನಿರ್ಮಾಣ ಮಾಡಬೇಕೆಂದು ಯೋಚಿಸಲ್ಲವಂತೆ. ಪ್ರಭಾಸ್ಗೆ ತೆಲುಗು, ತೆಮಿಳು, ಹಿಂದಿ, ಕನ್ನಡ ಚಿತ್ರರಂಗಗಳಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇರುವುದರಿಂದ ಈ ಎಲ್ಲಾ ಭಾಷೆಗಳಲ್ಲೂ ಚಿತ್ರ ನಿರ್ಮಾಣಗೊಳ್ಳುವುದಂತೂ ಖಚಿತ. ಈ ಚಿತ್ರಕ್ಕಾಗಿ ವಿಶೇಷ ಪ್ರಚಾರ ಕೂಡ ಮಾಡಲಿದ್ದಾರಂತೆ.ಸಲಾರ್ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಪ್ರಭಾಸ್ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದು, ನಾನು ಇಂದಿನಿಂದ ಸಲಾರ್ ಪ್ರಪಂಚದೊಳಗೆ ಕಾಲಿಟ್ಟಿದ್ದು, ಜನವರಿ ತಿಂಗಳಿನಿಂದ ಸಿನಿಮಾದ ಷೂಟಿಂಗ್ ಪ್ರಾರಂಭವಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಪ್ರಶಾಂತ್ ನೀಲ್ ಅವರು ನಿರ್ದೇಶಿಸುತ್ತಿರುವ ಕೆಜಿಎಫ್ 2 ಸಿನಿಮಾದ ಶೂಟಿಂಗ್ ಹೈದ್ರಾಬಾದ್ನಲ್ಲೇ ನಡೆಯುತ್ತಿದ್ದು ಚಿತ್ರೀಕರಣವು ಈ ತಿಂಗಳ ಅಂತ್ಯಕ್ಕೆ ಮುಗಿಯುವುದರಿಂದ ಸಂಕ್ರಾಂತಿಯ ನಂತರ ಪ್ರಭಾಸ್ ನಟನೆಯ ಸಲಾರ್ ಚಿತ್ರವನ್ನು ನೀಲ್ ಕೈಗೆತ್ತಿಕೊಳ್ಳುವುದು ಖಚಿತವಾಗಿದೆ. ಪ್ರಭಾಸ್ ಅವರು ಆದಿಪುರುಷ್ ಹಾಗೂ ರಾಧೇಶ್ಯಾಮ್ ಚಿತ್ರದ ಚಿತ್ರೀಕರಣದಲ್ಲಿ ಫುಲ್ ಬ್ಯುಸಿಯಾಗಿದ್ದು ಆದಿಪುರುಷ್ ಚಿತ್ರವು 2022ರಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ.
ಪ್ರಶಾಂತ್ ನೀಲ್ ಈಗಾಗಲೇ ಶ್ರೀಮುರಳಿ ನಟನೆಯ ಉಗ್ರಂ, ಯಶ್ ಅಭಿನಯದ ಕೆಜಿಎಫ್, ಕೆಜಿಎಫ್ 2 ಚಿತ್ರಗಳನ್ನು ನಿರ್ದೇಶಿಸಿದ್ದು ಸಲಾರ್ ಚಿತ್ರವನ್ನು ಮತ್ತಷ್ಟು ರಾ ಆಗಿ ನಿರ್ದೇಶಿಸುವ ಸೂಚನೆಗಳಿವೆ. ಏನೇ ಆದರೂ ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್ನ ಸಲಾರ್ ಚಿತ್ರವನ್ನು ನೋಡಲು 2022ರವರೆಗೂ ಕಾಯಲೇಬೇಕು.
Be the first to comment