‘ಅಗ್ನಿ ಪ್ರವಾ’ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕ್ಯಾಮರಾ ಚಾಲನೆ

ಸಂಸ್ಕೃತದ ಪದ ಶೀರ್ಷಿಕೆಯಾಯ್ತು; ಮುಹೂರ್ತ ಮುಗಿಸಿಕೊಂಡ ಅಗ್ನಿಪ್ರವ ಸಿನಿಮಾ

ಸಂಸ್ಕ್ರತ ಭಾಷೆಯ ಶೀರ್ಷಿಕೆ ಎಲ್ಲ ಭಾಷೆಯಲ್ಲೂ ಸಲ್ಲುತ್ತದೆ ಎಂಬುದು ಬಹುತೇಕ ನಿರ್ದೇಶಕರ ಅಭಿಪ್ರಾಯ. ಇದೀಗ ಅಂಥದ್ದೇ ಸಂಸ್ಕ್ರತದ ಶೀರ್ಷಿಕೆಯನ್ನಿಟ್ಟುಕೊಂಡು ಅಗ್ನಿಪ್ರವ ಸಿನಿಮಾ ಇತ್ತಿಚೆಗಷ್ಟೇ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಮುಹೂರ್ತ ನೆರವೇರಿಸಿಕೊಂಡಿದೆ.

ಬಾಹುಬಲಿ ಕಥೆಗಾರ ವಿಜಯೇಂದ್ರ ಪ್ರಸಾದ್ ಕ್ಯಾಮರಾಕ್ಕೆ ಚಾಲನೆ:
ಸುರೇಶ್ ಆರ್ಯ ಅಗ್ನಿಪ್ರವ ಚಿತ್ರದ ಮೂಲಕ ಚಂದನವನಕ್ಕೆ ಆಗಮಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಇವರಿಗಿದು ಕನ್ನಡದ ಮೊದಲ ಸಿನಿಮಾ. ಈ ಮೊದಲ ಚಿತ್ರಕ್ಕೆ ಖ್ಯಾತ ಕಥೆಗಾರ, ಬಾಹುಬಲಿ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಆಗಮಿಸಿ, ಕ್ಯಾಮರಾಕ್ಕೆ ಚಾಲನೆ ನೀಡಿ ಶುಭ ಕೋರಿದ್ದಾರೆ. ಡಾ. ರಾಜಕುಮಾರ್ ಹಿರಿಯ ಪುತ್ರಿ ಲಕ್ಷ್ಮೀ ಮತ್ತು ಪತಿ ಗೋವಿಂದ್ ರಾಜ್ ಕ್ಲಾಪ್​ ಮಾಡಿ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

ಚಿತ್ರದ ಮುಹೂರ್ತ ನೆರವೇರಿಸಿ ಮಾತನಾಡಿದ ವಿಜಯೇಂದ್ರ ಪ್ರಸಾದ್​, ‘ಕಥೆ ಕೇಳಿದಾಗಲೇ ಒಂದು ಕುತೂಹಲವಿತ್ತು. ಸೊಗಸಾದ ಕಥೆ ಮಾಡಿಕೊಂಡಿದ್ದಾರೆ. ಎಳೆ ಕೇಳಿ ನನಗೇ ಆಶ್ಚರ್ಯವಾಯಿತು. ತಂಡಕ್ಕೆ ಒಳ್ಳೆಯದಾಗಲಿ. ಇನ್ನು ಈ ಚಿತ್ರದ ಮುಹೂರ್ತಕ್ಕೆ ಡಾ. ರಾಜಕುಮಾರ ಮಗಳು ಬಂದಿದ್ದಾರೆ ಎಂದರೆ ಅದೇ ಒಂದು ವಿಶೇಷ. ದೊಡ್ಡಮನೆಯವರ ಆಶೀರ್ವಾದ ಈ ಚಿತ್ರದ ಮೇಲಿದೆ ಎಂದೇ ಅರ್ಥ ಎಂದರು.

ನವರತ್ನ ಪಿಕ್ಚರ್ಸ್​ ಬ್ಯಾನರ್​ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ನಾಯಕಿಯಾಗಿ ನಟಿಸುವುದರ ಜತೆಗೆ ನಿರ್ಮಾಪಕಿಯಾಗಿ ಬಂಡವಾಳ ಹೂಡುತ್ತಿದ್ದಾರೆ ನಟಿ ವರ್ಷಾ ತಮ್ಮಯ್ಯ. ತೆಲುಗಿನಲ್ಲಿ 5 ಸಿನಿಮಾ ಮಾಡಿರುವ ವರ್ಷಾ, ಕಥೆಯ ಒಂದೆಳೆ ಕೇಳಿಯೇ ಇಷ್ಟಪಟ್ಟು ನಟಿಸಲು ಮತ್ತು ಬಂಡವಾಳ ಹೂಡಲು ಮುಂದೆ ಬಂದರಂತೆ. ಇವರ ಈ ಸಿನಿಮಾ ಸಾಹಸಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಜೀತೇಂದ್ರ ಜೋಸೈಮನ್​ ಸಾಥ್​ ನೀಡುತ್ತಿದ್ದಾರೆ. ‘ಚಿತ್ರದ ಕಥೆ ತುಂಬ ಸ್ಟ್ರೇಟ್ ಆಗಿದೆ. ನಾನೇ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತೇನೆ. ಕಥೆಯ ಒಂದೆಳೆ ತುಂಬ ಇಷ್ಟವಾಯ್ತು. ಹಾಗಾಗಿ ನಾನೇ ನಿರ್ಮಾಣಕ್ಕಿಳಿದೆ. ಒಂದು ಕಮರ್ಷಿಯಲ್ ಸಿನಿಮಾದಲ್ಲಿ ಯಾವೆಲ್ಲ ಅಂಶಗಳು ಇರುತ್ತವೋ ಅವೆಲ್ಲವೂ ಈ ಸಿನಿಮಾದಲ್ಲಿಯೂ ಕಾಣಿಸಲಿವೆ. ಎಲ್ಲ ನವರಸಗಳ ಮಿಶ್ರಣವೇ ಅಗ್ನಿಪ್ರವ. ಈ ನಮ್ಮ ಸಿನಿಮಾಕ್ಕೆ ಖ್ಯಾತ ಕಥೆಗಾರರಾದ ವಿಜಯೇಂದ್ರ ಪ್ರಸಾದ್ ಬಂದು ಹರಸಿದ್ದು ನಮ್ಮ ಅದೃಷ್ಟ. ಒಳ್ಳೇ ಆ್ಯಕ್ಷನ್ ಪ್ಯಾಕ್ ಸೀನ್ಸ್‌ಗಳು ಚಿತ್ರದಲ್ಲಿರಲಿವೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಚಿತ್ರ ತೆರೆಕಾಣಲಿದೆ ಎಂದು ಹೇಳಿಕೊಳ್ಳುತ್ತಾರವರು.

ಹಾಗಾದರೆ ಏನಿದು ಅಗ್ನಿಪ್ರವ? ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಸುರೇಶ್ ಆರ್ಯ, ‘ಇದೊಂದು ಮಹಿಳಾ ಪ್ರಧಾನ ಸಿನಿಮಾ. ಅಗ್ನಿಪ್ರವ ಎಂದರೆ ಬೆಳಕು ಪ್ರವಹಿಸುವುದು ಎಂದರ್ಥ. ಇಡೀ ಸಿನಿಮಾ ನಾಯಕಿ ಸುತ್ತಲೇ ಸಾಗುವುದರಿಂದ ಕಮರ್ಷಿಯಲ್ ಅಂಶಗಳ ಜತೆಗೆ ಒಂದಷ್ಟು ಮಿಸ್ಟರಿ ಥ್ರಿಲ್ಲರ್ ಅಂಶಗಳನ್ನು ಸೇರಿಸಿದ್ದೇವೆ. ಸಿನಿಮಾ ನೋಡುತ್ತಿದ್ದರೆ, ನಾಯಕಿ ವಿಲನ್ ಥರ ಕಾಣಿಸುತ್ತಾಳೆ. ಆದರೆ, ಚಿತ್ರದ ಹೀರೋಯಿನ್ ಅವಳೇ ಆಗಿರುತ್ತಾಳೆ. ಅದರ ವಿಶೇಷತೆಯನ್ನು ಸಿನಿಮಾದಲ್ಲಿಯೇ ನೋಡಬೇಕು ಎಂದರು ಸುರೇಶ್. ನಟ ನಿರ್ದೇಶಕ ಜೋ ಸೈಮನ್ ಈ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಇನ್ನುಳಿದಂತೆ ಮುಹೂರ್ತ ಕಾರ್ಯಕ್ರಮದಲ್ಲಿ ನಟ ನಾರಾಯಣ ಸ್ವಾಮಿ, ನಟಿ ಜ್ಯೋತಿ ರೈ, ವೆಂಕಟೇಶ್ ಪ್ರಸಾದ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸೇರಿ ಹಲವರು ಭಾಗವಹಿಸಿದ್ದರು. ಅಗ್ನಿಪ್ರವ ಚಿತ್ರಕ್ಕೆ ಉದಯ್ ಶೆಟ್ಟಿ, ಯುವ, ಸುರೇಶ್ ಆರ್ಯ ಕಥೆ ಬರೆದರೆ, ಲವಿತ್ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಶಿವದತ್ತ, ಡಾ ರಾಮಕೃಷ್ಣ ಕೋಡೂರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!