ನಟ ಅವಿನಾಶ್ ಕನ್ನಡ ಚಿತ್ರರಂಗದಲ್ಲಿ ಮೂರುವರೆ ದಶಕಗಳನ್ನ ಪೂರೈಸಿದ್ದಾರೆ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ರಂಜಿಸಿದ್ದಾರೆ. ಇಂತಹ ಅವಿನಾಶ್ ಈಗ ಅರಿಷಡ್ವರ್ಗ ಎಂಬ ಚಿತ್ರದಲ್ಲಿ ಮತ್ತೊಂದು ವಿಭಿನ್ನ ಅವತಾರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭ ಇತ್ತೀಚಿಗೆ ಓರಾಯನ್ ಮಾಲ್ ನಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ನಟ ನಿರ್ದೇಶಕ, ಚಿಂತಕ ಪ್ರಕಾಶ್ ಬೆಳವಾಡಿ, ಈ ಸಿನಿಮಾ ನಾನು ನೋಡಿದ್ದೇನೆ ಅದ್ಬುತವಾಗಿದೆ. ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಆದರೆ ವಿಶೇಷವಾಗಿ ಹೇಳಬೇಕೆಂದರೆ ಅವಿನಾಶ್ ಮನೋಜ್ಞ ಅಭಿನಯ ನೀಡಿದ್ದಾರೆ. ಅವರ ಅಭಿನಯ ನೋಡಿ ನಾನಂತೂ ಪರವಶನಾದೆ. ಒಂದು ವೇಳೆ ಈ ವರ್ಷದ ರಾಷ್ಟ್ರೀಯ ಪ್ರಶಸ್ತಿ ಜೂರಿಯಲ್ಲಿ ನಾನಿದ್ರೆ, ಖಂಡಿತ ಅವಿನಾಶ್ ಗೆ ಅತ್ಯುತ್ತಮ ಅವಾರ್ಡ್ ಕೊಡ್ತಿದ್ದೆ ಎಂದು ಮನಸಾರೆ ಕೊಂಡಾಡಿದರು.
ಇನ್ನು ಪ್ರಕಾಶ್ ಬೆಳವಾಡಿ ಅವರ ಮಾತುಗಳಿಗೆ ಅಷ್ಟೇ ಆತ್ಮೀಯವಾಗಿ ಪ್ರತಿಕ್ರಿಯಿಸಿದ ಅವಿನಾಶ್, ಈ ರೋಲ್ ನಿಂದ ನನಗೆ ಏನ್ ಸಿಗುತ್ತೋ, ಬಿಡುತ್ತೋ? ಪ್ರಕಾಶ್ ಬೆಳವಾಡಿ ಅವರು ಆಡಿದ್ರಲ್ಲಾ? ಆ ಮಾತುಗಳೇ ನನಗೆ ಪ್ರಶಸ್ತಿ ಇದ್ದಂತೆ ಎಂದರು. ಅರಿಷಡ್ವರ್ಗ ಸಿನಿಮಾ, ಮನುಷ್ಯನ ಭಾವನೆಗಳ ಕುರಿತಾಗಿ ಮೂಡಿಬಂದಿರೋ ಚಿತ್ರ. ಒಂದು ಕೊಲೆಯ ಸುತ್ತ ಈ ಆರು ಭಾವನೆಗಳು ಹೇಗೆಲ್ಲಾ ಕೆಲಸ ಮಾಡಿವೆ ಎಂಬ ಅಂಶವನ್ನೇ ಇಟ್ಟುಕೊಂಡು ಥ್ರಿಲ್ಲಿಂಗ್ ಕಥೆ ಹೆಣೆದಿದ್ದಾರೆ ಅರವಿಂದ್ ಕಾಮತ್.
ಅರವಿಂದ್ ಕಾಮತ್ ಗೆ ಇದು ಚೊಚ್ಚಲ ನಿರ್ದೇಶನವಾದರೂ, ಚಿತ್ರದ ಟ್ರೈಲರ್ ನೋಡಿದ್ರೆ, ಎಲ್ಲೂ ಹಾಗೆ ಅನಿಸೋದೆ ಇಲ್ಲ. ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕ ಸಿಕ್ಕ ಎನಿಸುವಷ್ಟು ಅದ್ಭುತವಾಗಿ 2 ನಿಮಿಷಗಳ ಥಿಯೇಟರಿಕಲ್ ಟ್ರೈಲರ್ ಮೂಡಿಬಂದಿದೆ.
ಸಂಯುಕ್ತ ಹೊರನಾಡು, ಮುಖ್ಯಪಾತ್ರದಲ್ಲಿದ್ದು, ಬಾಲಾಜಿ ಗಣೇಶ್, ನಂದಗೋಪಾಲ್, ಅರವಿಂದ್ ಕುಪಿಲ್ಕರ್, ಅಂಜು ನಾಯಕ್ ಅಳ್ವಾ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ಕೊರೋನಾ ಕಾಲದಲ್ಲಿ ದೊಡ್ಡ ದೊಡ್ಡ ನಟರೇ ಸಿನಿಮಾ ರಿಲೀಸ್ ಮಾಡೋಕೆ ಹಿಂಜರಿಯೋ ವೇಳೆ, ಇದೇ ತಿಂಗಳು 27 ರಂದು ಥಿಯೇಟರ್ ಗಳಲ್ಲಿ ರಂಜಿಸೋಕೆ ಸಜ್ಜಾಗಿದೆ ಅರಿಷಡ್ವರ್ಗ.
Be the first to comment